ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ಆರೋಪಿ ಪ್ರವೀಣ್ ಚೌಗಲೆ 14 ದಿನ ಪೊಲೀಸ್ ಕಸ್ಟಡಿಗೆ

Update: 2023-11-15 12:53 GMT

ಉಡುಪಿ, ನ.15: ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ಪ್ರಕರಣದ ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗಲೆ (39) ನನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.

ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಪಿಯ ಆರೋಗ್ಯ ತಪಾಸಣೆ ನಡೆಸಿ ಬಿಗಿ ಪೊಲೀಸ್ ಬಂದೋ ಬಸ್ತ್‌ನಲ್ಲಿ ಉಡುಪಿ ನ್ಯಾಯಾಲಯಕ್ಕೆ ಕರೆ ತರಲಾಯಿತು. ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಉಡುಪಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪೊಲೀಸರ ಪರವಾಗಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯುಟರ್ ಎಚ್.ಎಂ.ನದಾಫ್, ಆರೋಪಿಯನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದರು. ಅದರಂತೆ ನ್ಯಾಯಾಧೀಶ ಶ್ಯಾಮ್ ಪ್ರಸಾದ್ ಆರೋಪಿ ಯನ್ನು ನ.28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಆರೋಪಿ ಪರ ಸರಕಾರದಿಂದ ನೇಮಕ ಮಾಡಲಾದ ವಕೀಲ ರಾಜು ಪೂಜಾರಿ ಈ ಸಂದರ್ಭ ಹಾಜರಿದ್ದರು.

ಬಳಿಕ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಪೊಲೀಸರು ಕರೆದೊಯ್ದರು. ಸ್ಥಳದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿಗಳಾದ ಬೆಳ್ಳಿಯಪ್ಪ ಕೆ.ಯು., ದಿನಕರ ಕೆ.ಪಿ., ಅರವಿಂದ ಕಲಗುಜ್ಜಿ, ಪೊಲೀಸ್ ನಿರೀಕ್ಷಕ ರಾದ ಮಂಜಪ್ಪ, ದೇವರಾಜ್ ಹಾಜರಿದ್ದರು. ಕೋರ್ಟ್ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆರೋಪಿಯನ್ನು ಕಾಣಲು ಕೋರ್ಟ್ ಸುತ್ತ ಜನಸ್ತೋಮವೇ ನೆರೆದಿತ್ತು.





 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News