ಉಡುಪಿಯಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ: ತನಿಖೆ ಚುರುಕುಗೊಳಿಸಿ, ಆರೋಪಿ ಶೀಘ್ರ ಬಂಧನಕ್ಕೆ ಒಕ್ಕೊರಲಿನ ಆಗ್ರಹ
ಉಡುಪಿ, ನ.13: ದೀಪಾವಳಿಯ ಹಬ್ಬದಂದು ಬೆಳ್ಳಂಬೆಳಗ್ಗೆ ಅಕ್ರಮವಾಗಿ ಮನೆಗೆ ನುಗ್ಗಿ ತಾಯಿ ಮತ್ತು ಮೂವರು ಮಕ್ಕಳ ಅಮಾನುಷ ಕೊಲೆಗೈದಿರುವುದು ಅತ್ಯಂತ ಆಘಾತಕಾರಿ ಘಟನೆಯಾಗಿದ್ದು ಇಡೀ ಜಿಲ್ಲೆಯು ದೀಪಾವಳಿ ಹಬ್ಬದ ಸಂಭ್ರದಲ್ಲಿ ರುವಾಗ ನೋವಿನ ವಾತಾವರಣ ಸೃಷ್ಟಿ ಮಾಡುವಂತಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಬುದ್ಧಿವಂತರ ಜಿಲ್ಲೆ ಎಂದು ಹೆಸರು ಪಡೆದಿರುವ ಉಡುಪಿಯಲ್ಲಿ ಇಂತಹ ಅಮಾನುಷ ಘಟನೆ ನಡೆದಿರುವುದು ಇದೇ ಮೊದಲು ಹಾಗೂ ಅತ್ಯಂತ ಆಘಾತಕಾರಿ ವಿಚಾರವಾಗಿದೆ. ನೋವಿನಲ್ಲಿರುವ ಕುಟುಂಬದ ಸದಸ್ಯರೊಂದಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಜೊತೆಯಾಗಿದ್ದು ಪ್ರಕರಣದ ನಿಷ್ಪಕ್ಷಪಾತವಾದ ತನಿಖೆ ನಡೆಯುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಅವರ ತಂಡ ಕಾರ್ಯೋನ್ಮುಖವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಮಾಹಿತಿಯನ್ನು ಈಗಾಗಲೇ ರಾಜ್ಯ ಗೃಹ ಸಚಿವರು ಪಡೆದು ಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಪೊಲೀಸರಿಂದ ಮಾಹಿತಿ ಯನ್ನು ಪಡೆದಿದ್ದಾರೆ. ಪ್ರಕರಣದ ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಕೂಡ ಆತನನ್ನು ಪೊಲೀಸರು ಆದಷ್ಟೂ ಬೇಗ ಬಂಧಿಸುವ ವಿಶ್ವಾಸವಿದ್ದು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲಾ ಮುಸ್ಲಿಂ ಜಮಾಅತ್: ನೇಜಾರುನಲ್ಲಿ ನಡೆದ ಅಮಾನವೀಯ ಘಟನೆಯು ಮನುಷ್ಯ ಸಮಾಜವನ್ನು ನಾಚಿಸುವ ಕೃತ್ಯವಾಗಿದ್ದು ಇದರ ಬಗ್ಗೆ ಅತೀ ಶೀಘ್ರವಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು ಹಾಗೂ ಯಾವುದೇ ವಕೀಲರು ಇಂತಹ ದುಷ್ಕರ್ಮಿಗಳ ಪರವಾಗಿ ವಾದಿಸಬಾರದಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿಎಸ್‌ಎಫ್ ರಫೀಕ್ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್. ಸುಭಾನ್ ಅಹ್ಮದ್ ಹೊನ್ನಾಳ ಆಗ್ರಹಿಸಿದ್ದಾರೆ.
ಸಾಲಿಡಾರಿಟಿ ಉಡುಪಿ: ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿ ಸಿದ್ದು, ಹಾಡಹಗಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸ್ ಇಲಾಖೆ ಈ ಕೃತ್ಯ ಎಸಗಿದ ದುಷ್ಕರ್ಮಿಯನ್ನು ಶೀಘ್ರ ಬಂಧಿಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಅದರೊಂದಿಗೆ ಉಡುಪಿ ಜಿಲ್ಲೆಯ ಜನತೆ ಯಾವುದೇ ವದಂತಿಗಳಿಗೆ ಕಿವಿ ಗೊಡದೆ ಆರೋಪಿಯ ಪತ್ತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಇಂತಹ ಪ್ರಕರಣಗಳು ಜನರಲ್ಲಿ ಸಹಜವಾಗಿ ಆತಂಕ ಸೃಷ್ಟಿ ಮಾಡುತ್ತದೆ. ಆದ್ದರಿಂದ ಆದಷ್ಟು ಶೀಘ್ರ ಆರೋಪಿಗಳನ್ನು ಪೊಲೀಸ್ ಇಲಾಖೆ ಸೆರೆ ಹಿಡಿದು ಸೂಕ್ತ ಕಾನೂನು ಕ್ರಮ ಕೈಗೊಂಡು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಸಾಲಿಡಾರಿಟಿ ಉಡುಪಿ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರ್ ಬೆಟ್ಟು ಒತ್ತಾಯಿಸಿದ್ದಾರೆ.