"ಕುಡಿಯುವ ನೀರಿಗಾಗಿ ಖಾಸಗಿಯವರ ಬಾವಿ, ಕೊಳವೆ ಬಾವಿ ಗುರುತಿಸಿ"

Update: 2024-02-13 15:08 GMT

ಉಡುಪಿ, ಫೆ.13:ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಅಂತರ್ಜಲ ಮಟ್ಟ ಕುಸಿಯುತಿದ್ದು, ಮುಂಬರುವ ಬೇಸಿಗೆ ದಿನ ಗಳಲ್ಲಿ ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ನೀರನ್ನು ಒದಗಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಿನಿಂದಲೇ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಬೇಸಿಗೆ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿಯುವುದರ ಜೊತೆಗೆ, ಹಳ್ಳ-ಕೊಳಗಳಲ್ಲಿ ನೀರು ಹರಿಯುವ ಸೆಲೆ ಗಳು ಬತ್ತಿ ಹೋಗಿರುತ್ತದೆ. ಬಿರು ಬಿಸಿಲಿಗೆ ಕೆರೆ, ಜಲಾಶಯಗಳಲ್ಲಿನ ನೀರು ಸಹ ಆವಿ ಆಗಿರುತ್ತದೆ. ಹೀಗಾಗಿ ನೀರಿನ ಕೊರತೆ ಕೆಲವು ಪ್ರದೇಶಗಳಲ್ಲಿ ಕಂಡುಬರುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆ ಜನಸಾಮಾನ್ಯರಿಗೆ ಕುಡಿಯುವ ನೀರನ್ನು ಒದಗಿಸಲು ನೀರು ಲಭ್ಯವಿರುವ ಖಾಸಗಿಯವರ ಬಾವಿ, ಕೊಳವೆ ಬಾವಿ ಗಳನ್ನು ಈಗಲೇ ಗುರುತಿಸಿಟ್ಟುಕೊಳ್ಳುವಂತೆ ಡಾ.ವಿದ್ಯಾಕುಮಾರಿ ನಿರ್ದೇಶನ ನೀಡಿದರು.

ಒಂದೊಮ್ಮೆ ನೀರಿನ ಸಮಸ್ಯೆ ಕಂಡು ಬಂದ ಪ್ರದೇಶಗಳಲ್ಲಿ ಖಾಸಗಿ ಬಾವಿ-ಕೊಳವೆ ಬಾವಿಗಳಿಂದ ತಕ್ಷಣದಿಂದ ನೀರು ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆಗಳನ್ನು ನೀಡಿದರು.

ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸಿ: ಜಿಲ್ಲೆಯಲ್ಲಿ ನಿರ್ಮಿಸಿರುವ ಪ್ರತಿಯೊಂದು ಕಿಂಡಿ ಆಣೆಕಟ್ಟುಗಳಿಗೆ ಹಲಗೆಗಳನ್ನು ಅಳವ ಡಿಸಬೇಕು. ಇದರಿಂದ ನೀರು ನಿಂತು ಅಂತರ್ಜಲ ಮಟ್ಟ ಏರುತ್ತದೆ. ಹಲಗೆಗಳನ್ನು ಅಳವಡಿಸದೇ ಇದ್ದಲ್ಲಿ ನೀರು ಮುಂದೆ ಹರಿದು ಹೋಗುತ್ತದೆ ಅಥವಾ ಸಮುದ್ರದ ಉಪ್ಪು ನೀರು ಸಿಹಿ ನೀರಿನೊಂದಿಗೆ ಬೆರೆಯುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯವರು ತಕ್ಷಣ ಕ್ರಮ ವಹಿಸಬೇಕು ಎಂದರು.

ಮೇವು ಸಂಗ್ರಹಕ್ಕೆ ಸೂಚನೆ: ಪ್ರಸ್ತುತ ಜಿಲ್ಲೆಯಲ್ಲಿ ಜಾನುವಾರುಗಳಿಗೆ 21 ವಾರಗಳಿಗೆ ಆಗುವಷ್ಟು 2.25 ಲಕ್ಷ ಮೆಟ್ರಿಕ್ ಟನ್ ಮೇವು ಲಭ್ಯವಿದೆ. ಸರಕಾರ ಈಗಾಗಲೇ 5 ಲಕ್ಷ ರೂ. ಅನುದಾನವನ್ನು ಮೇವು ಸಂಗ್ರಹಣೆಗೆ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ರೈತರಿಗೆ ಈಗಾಗಲೇ ನೀಡಲಾಗಿರುವ ಮೇವಿನ ಮಿನಿ ಕಿಟ್‌ಗಳು ಹಾಗೂ ಪ್ರಸ್ತುತ ಬೆಳೆದಿರುವ ಮೇವು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಮುಂದೇನಾದರೂ ಸಮಸ್ಯೆ ಉಂಟಾದರೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನೋಡಿಕೊಳ್ಳಬೇಕು ಎಂದರು.

ಪಶು ಸಂಗೋಪನ ಇಲಾಖೆ ವತಿಯಿಂದ ಈಗಾಗಲೇ 1654 ಕಿಟ್ ಹಾಗೂ ಕೆಎಂಎಫ್ ವತಿಯಿಂದ 3918 ಕಿಟ್‌ಗಳನ್ನು ವಿತರಿಸಲಾಗಿದೆ. ಈಗಾಗಲೇ ರಚಿಸಿರುವ ಟಾಸ್ಕ್‌ಫೋರ್ಸ್ ಸಮಿತಿ ಸಭೆಯನ್ನು ನಡೆಸುವು ದರೊಂದಿಗೆ ಬರ ನಿರ್ವಹಣೆ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಬೇಕು ಎಂದರು.

ಚರಂಡಿ ಸ್ವಚ್ಛಗೊಳಿಸಿ: ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ತೋಡು ಹಾಗೂ ಚರಂಡಿ ಗಳಲ್ಲಿರುವ ಹೂಳು, ತರಗೆಲೆ, ಕಸ-ಕಡ್ಡಿಗಳನ್ನು ತೆರವು ಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊ ಳ್ಳಬೇಕು. ನೀರು ನಿಂತಲ್ಲಿ ಸೊಳ್ಳೆಗಳ ಸಂತಾನೋತ್ಪತಿಗೆ ಆಸ್ಪದವಾಗಿ ರೋಗ ರುಜಿನಗಳು ಹರಡುವ ಸಾಧ್ಯತೆ ಇರುವು ದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದ ಅವರು, ಕುಡಿಯುವ ನೀರಿನ ಪೈಪ್‌ಲೈನ್ ದುರಸ್ಥಿ, ಕುಡಿಯುವ ನೀರಿನ ಬಾವಿಗಳ ಸ್ವಚ್ಛತೆ, ಸರಕಾರಿ ಕಟ್ಟಡಗಳ ಮೇಲ್ಛಾವಣಿಯಲ್ಲಿರುವ ಕಸ-ಕಡ್ಡಿಗಳನ್ನು ತೆಗೆದು ಸ್ವಚ್ಛವಾಗಿರಿಸಿ ಕೊಳ್ಳಬೇಕು ಎಂದರು.

ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಆಶ್ರಯ ತಾಣಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಲ್ಲಿ ಇವುಗಳ ಬಳಕೆ ಮಾಡಿಕೊಳ್ಳಬೇಕು. ಇವುಗಳ ನಿರ್ವಹಣೆ ಮಾಡಲು ಸಮಿತಿಯನ್ನು ರಚಿಸಬೇಕು ಎಂದ ಅವರು, 300 ಜನ ಆಪದ್ ಮಿತ್ರ ಸ್ವಯಂ ಸೇವಕರಿದ್ದು, ಇದರ ಜೊತೆಯಲ್ಲಿ ಇನ್ನು ಹೆಚ್ಚು ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣೆ ತರಬೇತಿ ನೀಡಬೇಕು ಎಂದರು.

ನೀರಿನ ಮಿತಿ ಬಳಕೆ: ಸಾರ್ವಜನಿಕರು ನೀರಿನ ಮಿತ ಬಳಕೆ ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಂದು ಕಟ್ಟಡಗಳು ಹಾಗೂ ಜಮೀನುಗಳಲ್ಲಿ ಮಳೆ ನೀರಿನ ಕೊಯ್ಲು ಅಳವಡಿಕೆ ಮಾಡಿ ನೀರು ಎಲ್ಲಿಯೂ ಪೋಲಾಗದಂತೆ ನೋಡಿಕೊಂಡರೆ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರ ಬಗ್ಗೆ ಒತ್ತು ನೀಡಬೇಕು ಎಂದ ಅವರು, ಸ್ಥಳೀಯ ಸಂಸ್ಥೆಗಳು ಕಟ್ಟಡ ಪರವಾನಿಗೆ ನೀಡುವಾಗ ಕಡ್ಡಾಯವಾಗಿ ಮಳೆ ನೀರಿನ ಕೊಯ್ಲು ಅಳವಡಿಸಲು ಸೂಚನೆ ನೀಡಬೇಕು ಎಂದರು.

ವಿದ್ಯುತ್ ತಂತಿಗಳಿಗೆ ಅಪಾಯಕಾರಿಯಾಗಿರುವಂತಹ ಮರದ ಕೊಂಬೆ ಗಳನ್ನು ಹಾಗೂ ಗಾಳಿ-ಮಳೆಗೆ ಬುಡ ಸಮೇತ ಉರುಳಿ ಬೀಳುವಂತ ಮರಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಅರಣ್ಯ ಇಲಾಖೆಯು ಇತರ ಇಲಾಖೆಯ ಸಂಹಯೋಗದೊಂದಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್, ನಗರಸಭೆಯ ಪೌರಾಯುಕ್ತ ರಾಯಪ್ಪ, ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News