ಇಸ್ಲಾಂ, ಮುಸ್ಲಿಮರ ವಿರುದ್ಧ ದ್ವೇಷ ಟ್ವೀಟ್: ಡಾ. ಕೀರ್ತನ್ ಉಪಾಧ್ಯ ವಿರುದ್ಧ ಪ್ರಕರಣ ದಾಖಲು

Update: 2024-07-15 06:35 GMT

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮ ಹಾಗು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಮೆಂಟ್ ಮಾಡುವ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಲು ಯತ್ನಿಸಿದ ಆರೋಪದಡಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಾಗಿದೆ.

ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಉಪಾಧ್ಯ 'ಲೋನ್ಲಿ ಸ್ಟ್ರೇಂಜರ್ (Lonely stranger)' ಎಂಬ ಹ್ಯಾಂಡಲ್ ನ ಎಕ್ಸ್ ಖಾತೆಯನ್ನು ಹೊಂದಿದ್ದಾರೆ. ಜು.13ರಂದು ಎಕ್ಸ್‌ನಲ್ಲಿ 'ಅಭಿ ಆ್ಯಂಡ್ ನೀಯು' ಖಾತೆಯಿಂದ ‘ಈ ಜಗತ್ತಿನಿಂದ ನೀವು ಏನಾದರೂ ಒಂದನ್ನು ಇಲ್ಲವಾಗಿಸಲು ಬಯಸುವುದಾದರೆ ಅದು ಯಾವುದು?’ ಎಂಬುದಾಗಿ ಪ್ರಶ್ನಿಸಲಾಗಿತ್ತು. ಅದಕ್ಕೆ ಡಾ.ಉಪಾಧ್ಯ ತಮ್ಮ 'ಲೋನ್ಲಿ ಸ್ಟ್ರೇಂಜರ್' ಹ್ಯಾಂಡಲ್ ನಿಂದ ‘ಮುಸ್ಲಿಂ ಕಮ್ಯುನಿಟಿ’ ಎಂದು ಉತ್ತರಿಸಿದ್ದರು. ಜಗತ್ತಿನಿಂದ ಮುಸ್ಲಿಂ ಸಮುದಾಯವನ್ನು ಇಲ್ಲವಾಗಿಸಲು ಬಯಸುತ್ತೇನೆ ಎಂಬ ಅರ್ಥ ನೀಡುವ ಡಾ. ಕೀರ್ತನ್ ಉಪಾಧ್ಯ ಅವರ ಈ ಕಮೆಂಟ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಅದರ ಸ್ಕ್ರೀನ್‌ ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ವೈದ್ಯರ ವಿರುದ್ಧ ಕ್ರಮಕ್ಕೆ ಕರ್ನಾಟಕ ಡಿಜಿಪಿಯನ್ನು ಟ್ಯಾಗ್ ಮಾಡಿ ಹಲವರು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ನ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವ ಪೊಲೀಸ್ ಉಪನಿರೀಕ್ಷಕ(ನಿಸ್ತಂತು) ಅಜ್ಮಲ್ ಇಬ್ರಾಹಿಂ ಇ.ಎ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಇವರು ತಮ್ಮ ದೂರಿನಲ್ಲಿ, ಈ ವಿಚಾರ ಜು.14ರಂದು ಸಂಜೆ 4:30ರ ಸುಮಾರಿಗೆ ಗಮನಕ್ಕೆ ಬಂದಿದ್ದು, ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿಯಾಗಿ ಕಮೆಂಟ್ ಮಾಡುವ ಮೂಲಕ ಧರ್ಮ- ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸಿದ 'ಲೋನ್ಲಿ ಸ್ಟ್ರೇಂಜರ್' ಖಾತೆಯನ್ನು ಹೊಂದಿರುವ ಡಾ.ಕೀರ್ತನ್ ಉಪಾಧ್ಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಡಾ. ಕೀರ್ತನ್ ಉಪಾಧ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 196, 353 ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ ಡಾ.ಉಪಾಧ್ಯ ತನ್ನ ಪೋಸ್ಟ್‌ ಅನ್ನು ಡಿಲೀಟ್ ಮಾಡಿ, ಮತ್ತೊಂದು ಟ್ವೀಟ್ ಮಾಡಿದ್ದು, ಅದರಲ್ಲಿ ಯಾರೋ ತನ್ನ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಈ ಸಂಬಂಧ ಡಾ.ಉಪಾಧ್ಯ ಯಾವುದೇ ಠಾಣೆಯಲ್ಲೂ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡಾ. ಕೀರ್ತನ್ ಉಪಾಧ್ಯ ತಾನು ಮಾಡಿದ್ದ ವಿವಾದಾತ್ಮಕ ಟ್ವೀಟ್ ಅನ್ನು ಡಿಲೀಟ್ ಮಾಡಿ ತನ್ನ ಎಕ್ಸ್ ಖಾತೆಯನ್ನೂ ಲಾಕ್ ಮಾಡಿ ಅವರ ಯಾವುದೇ ಟ್ವೀಟ್ ಅನ್ನು ನೋಡಲು ಆಗದಂತೆ ಮಾಡಿದ್ದಾರೆ ಎಂದು ಆಲ್ಟ್ ನ್ಯೂಸ್ ನ ಮೊಹಮ್ಮದ್ ಝುಬೇರ್ ಹೇಳಿದ್ದಾರೆ. ಅವರ ಹ್ಯಾಂಡಲ್ Lonely stranger ಇದ್ದಿದ್ದು ಈಗ stranger solo ಎಂದು ಬದಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News