ಉಡುಪಿ ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕೆ ಬಾಲಗ್ರಹ ಪೀಡೆಪಾರಂಪರಿಕ ಹಳೆ ಕಟ್ಟಡ ಕೆಡವಲು ಆಕ್ಷೇಪ: ಇನ್ನೂ ಕೂಡಿಬಾರದ ಶುಭಕಾಲ

Update: 2024-08-18 10:08 GMT

ಉಡುಪಿ, ಆ.18: ಉಡುಪಿ ನಗರಸಭೆಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಲೋಕಾಯುಕ್ತ ಕಛೇರಿ ಬಳಿಯ ತಾಲೂಕು ಕಚೇರಿಯ ಹಳೆ ಕಟ್ಟಡದ 96 ಸೆಂಟ್ಸ್ ಜಾಗವನ್ನು ರಾಜ್ಯ ಸರಕಾರ ಉಚಿತವಾಗಿ ನೀಡಿ ಎರಡು ವರ್ಷಗಳೇ ಕಳೆದರೂ ಇನ್ನು ಕೂಡ ಹಳೆ ಕಟ್ಟಡ ಕೆಡವಲು ಮತ್ತು ಹೊಸ ಕಟ್ಟಡ ನಿರ್ಮಿಸಲು ಸಮಯ ಕೂಡಿಬಂದಿಲ್ಲ.

ಈ ಪಾರಂಪರಿಕ ಕಟ್ಟಡ ಕೆಡಲವು ಆಕ್ಷೇಪ ವ್ಯಕ್ತವಾಗಿ ರುವುದರಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿದೆ.ಬ್ರಿಟಿಷರ ಆಡಳಿತ ಕಾಲದಲ್ಲಿ ರೂಪುಗೊಂಡ ಉಡುಪಿ ಪುರಸಭೆಗೆ(1939 ರಿಂದ 1995) ಕೆ.ಎಂ.ಮಾರ್ಗದಲ್ಲಿ ಹೊಸ ಕಟ್ಟಡವನ್ನು 1972ರಲ್ಲಿ ನಿರ್ಮಿಸಿದ್ದು, ಬದಲಾದ ಪರಿಸ್ಥಿತಿಯಲ್ಲಿ ಮೀಟಿಂಗ್ ಹಾಲ್, ಪಾರ್ಕಿಂಗ್, ವಿವಿಧ ಕಛೇರಿಗಳಿಗೆ ಸ್ಥಳಾವಕಾಶದ ಕೊರತೆ, ಜನರಿಗೆ ಸಮಸ್ಯೆ ತೀವ್ರವಾಗಿದ್ದು, ಹೊಸ ಕಟ್ಟಡ ನಿರ್ಮಾಣದ ಕೂಗು ದಶಕದಿಂದ ಕೇಳಿಬರುತ್ತಿತ್ತು.

45 ಕೋಟಿಯಲ್ಲಿ ಹೊಸ ಕಟ್ಟಡ

ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಛೇರಿ ಸಮೀಪ ತಾಲೂಕು ಕಛೇರಿಯ ಹಳೆ ಕಟ್ಟಡದ ಜಾಗದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ(ತಳ, ನೆಲ ಸಹಿತ ಮೂರು ಮಹಡಿ) ಕಟ್ಟಡ ನಿರ್ಮಾಣಕ್ಕೆ ನೀಲ ನಕಾಶೆ ತಯಾರಿಸಿ, ಟೆಂಡರ್ ಆಹ್ವಾನಿಸುವ ಬಗ್ಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸರಕಾರದ ಅನುಮೋದನೆ ಪಡೆಯಲಾಗಿದ್ದು, 2023ರ ಮಾ.10ರಂದು ತಾಲೂಕು ಕಛೇರಿಯ ಹಳೆ ಕಟ್ಟಡ ತೆರವು, ನೆಲಸಮಕ್ಕೆ ಉಡುಪಿ ನಗರಸಭೆಯು ಇ-ಟೆಂಡರ್ ಆಹ್ವಾನಿಸಿತು. ಮಂಗಳೂರಿನ ಮಸೂದ್ ಮಹಮ್ಮದ್ ಕುದ್ರೋಳಿ 12.34 ಲಕ್ಷ ರೂ. ಮೊತ್ತಕ್ಕೆ ಬಿಡ್ ಮಾಡಿದ್ದು, ಹಣ ಪಾವತಿಗೆ ನಗರಸಭೆ 2023ರ ಮಾ.28 ರಂದು ಪತ್ರ ಬರೆದರೆ 2023ರ ಮೇ 3ರಂದು ಮತ್ತೊಂದು ಪತ್ರ ಬರೆದು ಶೇ.18 ಜಿಎಸ್‌ಟಿ(2.22 ಲಕ್ಷ ರೂ.) ಪಾವತಿಗೆ ಸೂಚಿಸಿತು. ಗುತ್ತಿಗೆದಾರರು ಸಂಪೂರ್ಣ ಹಣ ಪಾವತಿಸಿದ ಬಳಿಕ ಅಂತೂ ಇಂತೂ 2023ರ ಮೇ 31ಕ್ಕೆ ತಾಲೂಕು ಕಛೇರಿಯ ಹಳೆ ಕಟ್ಟಡವನ್ನು ಕೆಡವಿ ತೆಗೆಯಲು ಕಾರ್ಯಾದೇಶ ನೀಡಿತು.

ಕಟ್ಟಡ ಕೆಡವುದಕ್ಕೆ ಆಕ್ಷೇಪಅಭಿವೃದ್ಧಿ ಹೆಸರಿನಲ್ಲಿ 117 ವರ್ಷಗಳ ಹಿಂದಿನ ಐತಿಹಾಸಿಕ ಉಡುಪಿಯ ಹಳೆಯ ಸಬ್‌ಜೈಲು ಕಟ್ಟಡವನ್ನು ನೆಲಸಮಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತ ವಾಯಿತು. ಈ ಮೂಲಕ ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣಗೊಂಡ ಉಡುಪಿಯ ಏಕೈಕ ಪಾರಂಪರಿಕ ಕಟ್ಟಡ ಉಳಿಸಬೇಕೆಂಬ ಆಗ್ರಹ ಕೇಳಿ ಬಂತು.ಈ ಕಟ್ಟಡವನ್ನು ಉಳಿಸಲು ಆರ್ಕಿಟೆಕ್ಟ್‌ಗಳು ಹಾಗೂ ಕಲಾವಿದರು ವಿಶಿಷ್ಟ ರೀತಿಯ ಅಭಿಯಾನವನ್ನು ಆರಂಭಿಸಿದರು.

ಈ ಕಟ್ಟಡದ ರಚನೆಯ ಬಗ್ಗೆ ದಾಖಲೀಕರಣ ಕಾರ್ಯದಲ್ಲಿ ನಡೆಸಿ, ಈ ಕಟ್ಟಡದ ಕಲಾಕೃತಿಗಳನ್ನು ತಮ್ಮ ಕುಂಚದಲ್ಲಿ ರಚಿಸಿ ಜಾಗೃತಿ ಮೂಡಿಸಿದರು. ಈ ಹಳೆಯ ಪಾರಂಪರಿಕ ಕಟ್ಟಡವನ್ನು ಉಳಿಸುವಂತೆ ಉಡುಪಿ ಜಿಲ್ಲಾಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಅದರಂತೆ 2023ರ ಜು.3ರಂದು ತಾಲೂಕು ಕಛೇರಿಯ ಹಳೆ ಕಟ್ಟಡ ಕೆಡವಲು ನೀಡಿದ್ದ ಕಾರ್ಯಾದೇಶವನ್ನು ನಗರಸಭೆ ತಾತ್ಕಾಲಿಕವಾಗಿ ತಡೆ ಹಿಡಿಯಿತು.

‘ಉಡುಪಿ ಜಿಲ್ಲಾಧಿಕಾರಿಯೇ ಉಡುಪಿ ನಗರಸಭೆಯ ಆಡಳಿತಾಧಿಕಾರಿ ಯಾಗಿದ್ದರೂ ಕಳೆದ ಒಂದು ವರ್ಷ ಒಂದು ತಿಂಗಳಿನಿಂದ ತಾಲೂಕು ಕಛೇರಿಯ ಹಳೆ ಕಟ್ಟಡ ಕೆಡವಲು ಇದ್ದ ಅಡ್ಡಿ ಆತಂಕಗಳ ಜತೆಗೆ ಆಕ್ಷೇಪವನ್ನೇ ನೆಪವಾಗಿಟ್ಟಿದ್ದರಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಪಾರಂಪರಿಕ ಕಟ್ಟಡದ ನೆಲೆಯಲ್ಲಿ ಬಂದ ಆಕ್ಷೇಪದ ಪಿಳ್ಳೆ ನೆಪವೇ ಹಳೆ ಕಟ್ಟಡ ಕೆಡವಲು, ಹೊಸ ಕಟ್ಟಡ ಕಾಮಗಾರಿ ಆರಂಭಕ್ಕೆ ಬಾಲಗ್ರಹ ಪೀಡೆಯಾಗಿ ಪರಿಣಮಿಸಿದೆ’ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಆರೋಪಿಸಿದ್ದಾರೆ.


'ತಾಲೂಕು ಕಛೇರಿ ಹಳೆ ಕಟ್ಟಡ ಕೂಡಲೇ ಕೆಡವಿ, ನಗರಸಭೆಗೆ ಹೊಸ ಕಟ್ಟಡ ಶೀಘ್ರ ನಿರ್ಮಿಸಲು ಜಿಲ್ಲಾಡಳಿತ ಹಾಗೂ ನಗರಸಭೆ ಮುಂದಾಗಬೇಕು. ತಾಲೂಕು ಕಛೇರಿ ಹಳೆ ಕಟ್ಟಡ ಪ್ರದೇಶವು ಅನೈತಿಕ ಚಟುವಟಿಕೆಗಳ ತಾಣವಾಗಿ ಮುಂದುವರಿಯದಂತೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳ ಬೇಕು. ಉಡುಪಿ ನಗರಸಭೆಗೆ ಸುಸಜ್ಜಿತ ಕಟ್ಟಡ ಬೇಕೆಂಬ ಬಹುದಿನಗಳ ಕನಸು, ಜನರು ಎದುರಿಸುತ್ತಿರುವ ಸಮಸ್ಯೆ ಶೀಘ್ರವೇ ಪರಿಹಾರವಾಗಬೇಕು'

-ರೆನೋಲ್ಡ್ ಪ್ರವೀಣ್ ಕುಮಾರ್, ಮಾಜಿ ಉಪಾಧ್ಯಕ್ಷರು, ನಗರಸಭೆ ಉಡುಪಿ

'ಈ ಕಟ್ಟಡದಲ್ಲಿರುವ ಹಳೆಯ ಜೈಲು ಕಟ್ಟಡವನ್ನು ಉಳಿಸಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಸದ್ಯ ಹಳೆಯ ಕಟ್ಟಡ ಕೆಡವುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸ ಲಾಗಿತ್ತು. ಎರಡು ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು'

-ರಾಯಪ್ಪ, ಪೌರಾಯುಕ್ತರು, ಉಡುಪಿ ನಗರಸಭೆ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News