ಉಡುಪಿ| ಚರ್ಚ್‌ಗಳಲ್ಲಿ ಪೂಜೆ ಸಹಿತ 2025ರ ಹೊಸ ವರ್ಷಕ್ಕೆ ಸ್ವಾಗತ ಕೋರಿದ ಕ್ರೈಸ್ತರು
ಉಡುಪಿ, ಡಿ.31: ನೂತನ 2025ರ ವರ್ಷವನ್ನು ಉಡುಪಿ ಜಿಲ್ಲೆಯ ಕ್ರೈಸ್ತರು ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆ ಯೊಂದಿಗೆ ಸ್ವಾಗತಿಸಿದರು.
ಮಂಗಳವಾರ ಸಂಜೆ ವೇಳೆ ಇಗರ್ಜಿಗಳಿಗೆ ತೆರಳಿದ ಕ್ರೈಸ್ತರು ಕಳೆದ 2024ರ ವರ್ಷದಲ್ಲಿ ಸರ್ವರೀತಿಯಲ್ಲಿ ತಮ್ಮನ್ನು ಕಾಪಾಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದೊರಂದಿಗೆ ನೂತನ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಮಂಗಳವಾರ ರಾತ್ರಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ನೂತನ ವರ್ಷದಲ್ಲಿ ದೇವರು ತೋರಿದ ಹಾದಿಯಲ್ಲಿ ನಡೆದು ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರು ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡುವುದರೊಂದಿಗೆ ವಿಶ್ವಶಾಂತಿಗಾಗಿ ನಮ್ಮಿಂದಾಗುವ ಪ್ರಯತ್ನವನ್ನು ಮಾಡುವಂತೆ ಕ್ರೈಸ್ತ ಸಮುದಾಯಕ್ಕೆ ಕರೆ ನೀಡಿದರು.
ಪವಿತ್ರ ಬಲಿಪೂಜೆಯ ಮುಂಚಿತವಾಗಿ ಕಳೆದು ಹೋಗಲಿರುವ 2024ನೇ ವರ್ಷದಲ್ಲಿ ದೇವರು ಮಾಡಿದ ಎಲ್ಲಾ ರೀತಿಯ ಕ್ರಪಾವರಗಳಿಗೆ ದೇವರಿಗೆ ವಂದನೆಗಳನ್ನು ಅರ್ಪಿಸಿ ಪರಮ ಪ್ರಸಾದದ ವಿಶೇಷ ಆರಾಧನೆಯನ್ನು ನಡೆಸುವುದರೊಂದಿಗೆ 2025ರಲ್ಲಿ ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.
ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಪ್ರಧಾನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರುಗಳಾದ ವಂ.ಪ್ರದೀಪ್ ಕಾರ್ಡೋಜ, ವಂ.ಡಾ. ಜೆನ್ಸಿಲ್ ಆಲ್ವಾ ಹಾಗೂ ಇತರ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.
ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ.ಡಾ.ಲೆಸ್ಲಿ ಡಿಸೋಜ, ಉಡುಪಿ ಶೋಕ ಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಕುಂದಾಪುರ ಹೋಲಿ ರೋಸರಿ ಚರ್ಚಿ ನಲ್ಲಿ ವಂ.ಪಾವ್ಲ್ ರೇಗೊ, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ.ಆಲ್ಬನ್ ಡಿಸೋಜ, ತೊಟ್ಟಂ ಸಂತ ಅನ್ನಮ್ಮ ಚರ್ಚಿನಲ್ಲಿ ವಂ.ಡೆನಿಸ್ ಡೆಸಾ ನೇತೃತ್ವದಲ್ಲಿ ಹೊಸ ವರ್ಷ ಆಚರಣೆಯ ಪ್ರಯುಕ್ತ ಬಲಿಪೂಜೆಗಳು ನಡೆದವು
ಹೊಸ ವರ್ಷಾಚರಣೆ ಸ್ವಾಗತಿಸುವ ಅಂಗವಾಗಿ ಚರ್ಚುಗಳಲ್ಲಿ ಯುವ ಸಂಘಟನೆಯ ಸದಸ್ಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ, ಕೇಕ್ ವಿತರಣೆ ಕೂಡ ನಡೆಯಿತು. ಬಲಿಪೂಜೆಯ ಬಳಿಕ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.