ಉಡುಪಿ ನಗರದ ಬಸ್ ನಿಲ್ದಾಣಗಳಲ್ಲಿ ಕುಡುಕರ ಹಾವಳಿ!
ಉಡುಪಿ, ಜ.3: ವಲಸೆ ಕಾರ್ಮಿಕರು ವಿಪರೀತ ಪಾನಮತ್ತರಾಗಿ ನಗರದ ವಿವಿಧ ಬಸ್ ನಿಲ್ದಾಣಗಳಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀರಾ ತೊಂದರೆ ಎದುರಿಸುವಂತಾಗುತ್ತಿದೆ.
ಸಂಜೆಯಾಗುತ್ತಲೇ ಉಡುಪಿ ಸಿಟಿ ಬಸ್ ನಿಲ್ದಾಣ, ನರ್ಮ್ ಬಸ್ ನಿಲ್ದಾಣ ಸೇರಿದಂತೆ ಸುತ್ತಮತ್ತಲು ಮದ್ಯ ವಸನಿ ಕಾರ್ಮಿಕರು ಪಾನಮತ್ತರಾಗಿ ಪರಸ್ಪರ ಗಲಾಟೆ ಮಾಡುವುದು, ಕಚ್ಚಾಡಿಕೊಳ್ಳುವುದು, ಹೊಡೆದಾಡಿಕೊಳ್ಳುತ್ತಿದ್ದಾರೆ. ಇದೀಗ ಇವರು ಸ್ಥಳೀಯರ ಮೇಲೂ ಕಿರಿಕ್ ಮಾಡಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ತಗಾದೆ ಮಾಡುವ ಮದ್ಯ ವ್ಯಸನಿಗಳಿಗೆ ಸ್ಥಳೀಯರು ಎದುರು ಮಾತನಾಡಲು ಕೂಡ ಮುಂದಾಗುತ್ತಿಲ್ಲ. ಯಾಕೆಂದರೆ ಅವರೆಲ್ಲ ಮದ್ಯದ ಅಮಲಿನಲ್ಲಿ ಆಯುಧ ಅಥವಾ ಕಲ್ಲುಗಳಿಂದ ಹೊಡೆಯಬಹುದೆಂಬ ಭಯ ಸ್ಥಳೀಯರದ್ದಾಗಿದೆ. ಕೆಲವು ಮದ್ಯ ವ್ಯಸನಿಗಳು ತಂಡಗಳನ್ನು ಕಟ್ಟಿಕೊಂಡು ಸಾರ್ವಜನಿಕರಿಗೆ ಕಿರಿಕ್ ಮಾಡುತ್ತ ಮೊಬೈಲ್ ಎಳೆದುಕೊಳ್ಳುವುದು, ಹಲ್ಲೆ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ.
ರಾತ್ರಿ ಆಗುತ್ತಲೇ ಕಾರ್ಮಿಕರು ಅಲ್ಲಲ್ಲಿ ಮದ್ಯ ಸೇವನೆ ಮಾಡಿ, ಬಸ್ ನಿಲ್ದಾಣದಲ್ಲೇ ಊಟ ಬಹಿರ್ದೆಸೆ ಮುಗಿಸಿ, ಎಲ್ಲ ಜಾಗವನ್ನು ಮಲೀನ ಮಾಡುತ್ತಿದ್ದಾರೆ. ನರ್ಮ್ ಬಸ್ ನಿಲ್ದಾಣದಲ್ಲಿ ಸಂಜೆ ಏಳು ಗಂಟೆ ನಂತರ ಬಸ್ ಸಂಚಾರ ಇಲ್ಲದೆ ಇರುವುದರಿಂದ ನಿಲ್ದಾಣ ಖಾಲಿ ಆಗಿರುತ್ತದೆ. ಇದು ಕುಡುಕರಿಗೆ ವರದಾನವಾಗಿದೆ. ಇಡೀ ನಿಲ್ದಾಣದ ಪಾನಮತ್ತರ ತಾಣವಾಗಿ ಪರಿಣಮಿಸಿದೆ.
ಅಲ್ಲೇ ಮಲಗುವುದು, ಅಲ್ಲೇ ಊಟ, ಅಲ್ಲೇ ಮದ್ಯ ಸೇವನೆ, ಅಲ್ಲಿಯೇ ಜೂಜಾಡುತ್ತಾರೆ. ಮತ್ತೆ ವಿನಾಕಾರಣ ಗಲಾಟೆ ಮಾಡಿಕೊಳ್ಳುತ್ತಾರೆ. ಇವರು ಕುಡಿದ ಮದ್ಯದ ಬಾಟಲಿ, ತಿಂದ ವಸ್ತುಗಳನ್ನು ಅಲ್ಲಿಯೇ ಎಸೆದು ಗಲೀಜು ಮಾಡುತ್ತಿದ್ದಾರೆ. ಒಟ್ಟಾರೆ ರಾತ್ರಿಯಾಗುತ್ತಿದ್ದಂತೆ ಈ ಸ್ಥಳಗಳು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಕೂಡಲೇ ಪೊಲೀಸ್ ಇಲಾಖೆ ಹಾಗೂ ನಗರಸಭೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂಜೆ ಪೊಲೀಸರು ಇಲ್ಲಿ ಗಸ್ತು ತಿರುಗಾಡಬೇಕು. ಬಸ್ ನಿಲ್ದಾಣಗಳಿಗೆ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಬೇಕು. ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಬಸ್ ನಿಲ್ದಾಣದಲ್ಲಿ ಕುಡಿದು ಮಲಗಿ ಅಸಹ್ಯವಾಗಿ ವರ್ತಿಸಿರುವವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಆಗ್ರಹಿಸಿದ್ದಾರೆ.
‘ಸಿಟಿಬಸ್ ನಿಲ್ದಾಣದ ಹಾಗೂ ಅಕ್ಕಪಕ್ಕ ಹಗಲು ರಾತ್ರಿ ಈ ಕುಡುಕರ ಕಾಟದಿಂದ ಮುಕ್ತಿಗೊಳಿಸಬೇಕು. ಇಲ್ಲಿ ದಿನಂಪ್ರತಿ ಸಾವಿರಾರು ಪ್ರಯಾಣಿಕರು ಸಂಚಾರ ಮಾಡುವುದರಿಂದ ಇದೊಂದು ಉಡುಪಿಗೆ ಕೆಟ್ಟ ಹೆಸರು ತರಲು ಕಾರಣವಾಗ ಬಹುದು. ಆದುದರಿಂದ ನಗರದ ಬಸ್ ತಂಗುದಾಣ ಕುಡುಕರ ತಾಣವಾಗಬಾರದು. ಅಲ್ಲಲ್ಲಿ ಮಲಗಿ ಕುಡಿದು ಗಲಾಟೆ ಮಾಡಿ, ಅಶಾಂತಿ ಸೃಷ್ಠಿಸಿ, ಗಲೀಜು ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು. ನಗರ ಸಭೆ ಹಾಗೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಬೇಕು’
- ಗಣೇಶ್ ರಾಜ್ ಸರಳೇಬೆಟ್ಟು, ಸಾಮಾಜಿಕ ಕಾರ್ಯಕರ್ತ