ಹಾಜಿ ಸಯ್ಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ನಿಂದ 7 ಮನೆಗಳ ಹಸ್ತಾಂತರ; 14 ಮನೆಗಳ ನಿರ್ಮಾಣಕ್ಕೆ ಶಿಲಾನ್ಯಾಸ

Update: 2025-01-05 16:48 GMT

ಪಡುಬಿದ್ರಿ: ಹಾಜಿ ಸಯ್ಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿದ ಏಳು ಮನೆಗಳ ಹಸ್ತಾಂತರ ಹಾಗೂ 14 ಮನೆಗಳ ಶಿಲಾನ್ಯಾಸ ಕಾರ್ಯಕ್ರಮ ಕರ್ನಿರೆಯಲ್ಲಿ ರವಿವಾರ ನಡೆಯಿತು.

ಮನೆಗಳ ಉದ್ಘಾಟನೆಯನ್ನು ನೆರವೇರಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಪ್ರತಿಯೊಂದು ಕುಟುಂಬಕ್ಕೂ ಮನೆ ಬೇಕು ಎಂಬ ಕನಸು ಇದ್ದರೂ ಅದನ್ನು ಪೂರೈಸಲು ಸಾಧ್ಯವಾಗದ ಕುಟುಂಬದ ಕನಸನ್ನು ನನಸು ಮಾಡುವ ಈ ಯೋಜನೆಯು ಪ್ರತಿಯೋರ್ವನ ಕಣ್ಣು ಮಾತ್ರವಲ್ಲ ಹೃದಯ ತೆರೆಯುವಂತೆ ಮಾಡುವ ಈ ಅತೀ ದೊಡ್ಡ ಯೋಜನೆಯಾಗಿದೆ ಎಂದರು.

ಕೇವಲ ಆರ್ಥಿವಾಗಿ ಸದೃಢವಿದ್ದರೆ ಆಗದು. ಸಮಾಜದ ಕಟ್ಟಕಡೆಯ ಜನರ ಕನಸನ್ನು ನನಸು ಮಾಡುವ ಇಂತಹ ಯೋಜನೆಯು ಎಲ್ಲರಿಗೂ ಪ್ರೇರಣೆ ಮತ್ತು ಮಾದರಿ. ಈ ಮೂಲಕ ಜನರ ಪ್ರೀತಿ, ವಿಶ್ವಾಸವನ್ನು ಮಾತ್ರವಲ್ಲದೆ ಶಾಶ್ವತವಾದ ಈ ಯೋಜನೆಯಿಂದ ಜನರ ಸದಾ ನೆನಪಿನಲ್ಲಿಲ್ಲಿಡಲು ಸಾಧ್ಯ. ಈ ಯೋಜನೆಯ ಲಾಭ ಪಡೆದ ಕುಟುಂಬವು ನೆಮ್ಮದಿ, ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಜೀವನ ನಡೆಸಬೇಕು. ಮುಂದೆ ಈ ಸಂಸ್ಥೆಯ ಮೂಲಕ ಇನ್ನಷ್ಟು ಯೋಜನೆಗಳು ಜನರಿಗೆ ಸಿಗಲಿ ಎಂದು ಅವರು ಹಾರೈಸಿದರು.

50 ಮನೆಗಳ ನಿರ್ಮಾಣ ಯೋಜನೆ: ಅಧ್ಯಕ್ಷತೆಯನ್ನು ವಹಿಸಿದ್ದ ಹಾಜಿ ಸಯ್ಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್  ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಶೇಖ್ ಮಾತನಾಡಿ, ಈಗಾಗಲೇ ಮೊದಲ ಹಂತದಲ್ಲಿ ಏಳು ಮನೆಗಳನ್ನು ನಿರ್ಮಿಸಿ ಕುಟುಂಬಕ್ಕೆ ಹಸ್ತಾಂತರಿಸಾಗಿದೆ. ಇದೀಗ ಮತ್ತೆ ಏಳು ಮನೆಗಳನ್ನು ಇಂದು ಹಸ್ತಾಂತರಿಸಲಾಯಿತು. ಮುಂದೆ 14 ಮನೆಗಳ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಲಾಗಿದೆ. ಮತ್ತೆ ಈ ಜಾಗದಲ್ಲಿ ಮನೆ ನಿರ್ಮಿಸುವ ಯೋಜನೆ ಇದ್ದು, ಎರಡೂವರೆ ಎಕರೆ ಜಾಗದಲ್ಲಿಒಟ್ಟು 50 ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಸುಸಜ್ಜಿತ ಮನೆ:

ಹಾಜಿ ಸಯ್ಯದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು 950 ಚದರ ಮೀಟರ್‌ನ ಸುಸಜ್ಜಿತ ಪೀಠೋಪಕರಣಗಳನ್ನು ಒಳಗೊಂಡು ಅಡುಗೆ ಕೋಣೆ, ಹಾಲ್, ಎರಡು ಬೆಡ್ ರೂಂ, ವಾಶಿಂಗ್ ಮೆಶಿನ್‌ನೊಂದಿಗೆ ತಲಾ 20 ಲಕ್ಷ ರೂ. ವೆಚ್ಚದ ಮನೆ ಇದಾಗಿದೆ. ಕರ್ನಿರೆಯಲ್ಲಿ ಸೂರಿಲ್ಲದೆ ಇರುವವವ ಅರ್ಹರಿಗೆ ಈ ಮನೆಯನ್ನು ನೀಡಲಾಗುವುದು ಎಂದು ಕೆ.ಎಸ್. ಶೇಖ್ ಹೇಳಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ನೊಂದವರ ನೆಮ್ಮದಿಗಾಗಿ ನೆರಳು ನೀಡುವಂತಹ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಅವರ ಕನಸುಗಳನ್ನು ನನಸು ಮಾಡಿರುವುದು ಇದೊಂದು ಅದ್ಬುತ ಮತ್ತು ಉತ್ತಮವಾದ ಕಾರ್ಯಕ್ರಮ. ಇಂತಹ ನೂರಾರು ಸೇವೆಯನ್ನು ನೀಡುವ ಶಕ್ತಿ ಸಿಗುವಂತಾಗಲಿ ಎಂದು ಹಾರೈಸಿದರು.

ಮಾಜಿ ಶಾಸಕ ಮೊಯಿದಿನ್ ಬಾವ ಮಾತನಾಡಿ, ಸಯ್ಯದ್ ಹಾಜಿ ಅವರು ಸ್ವಂತ ಪರಿಶ್ರಮದಿಂದ ದುಡಿದು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಅವರ ಮಕ್ಕಳನ್ನೇ ದೊಡ್ಡ ಆಸ್ತಿಯನ್ನಾಗಿ ಮಾಡಿದ್ದಾರೆ. ಅವರ ಮಾರ್ಗದರ್ಶನದೊಂದಿಗೆ ಇಡೀ ಕುಟುಂಬ ಅನ್ಯೋನ್ಯತೆಯಿಂದ ಜೀವನ ನಡೆಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದು ಮಾತ್ರವಲ್ಲದೆ ಇವರ ಕ್ರಾಂತಿಕಾರಿಕ ಹೆಜ್ಜೆಯಿಂದ ಇಂತಹ ಸೇವೆಯನ್ನು ಮಾಡಲು ಸಾಧ್ಯವಾಗಿದೆ ಎಂದರು.

ವಿಶ್ವ ಬಂಟ್ಸ್ ವೆಲ್ಪೇರ್ ಫೆಡರೇಶನ್‌ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಮಾತನಾಡಿ, ನಾನು ನನ್ನ ಹೆಸರಿನೊಂದಿಗೆ ಕರ್ನಿರೆಯನ್ನು ಇಟ್ಟರೂ ಕರ್ನಿರೆ ಎಂಬ ಪುಟ್ಟ ಗ್ರಾಮವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸಯ್ಯದ್ ಹಾಜಿ ಕುಟುಂಬಕ್ಕೆ ಇದೆ. ಕರ್ನಿರೆ ಜಾತಿ, ಧರ್ಮ, ಬೇಧವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿರುವ ಊರಾಗಿದೆ. ಇಲ್ಲಿನ ಮಸೀದಿ ಪುನರ್ ನಿರ್ಮಾಣದಲ್ಲಿ ಹಿಂದುಗಳು ನೆರವಾದರೆ, ಹಿಂದೂಗಳ ದೇವಸ್ಥಾನ ನಿರ್ಮಾಣದಲ್ಲಿ ಮುಸ್ಲಿಮ್ ಸಮಾಜವೂ ಕೈಜೋಡಿಸಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೆ.ಎಸ್. ಅಶ್ರಫ್, ಜನರಿಗೆ ಉಪಕಾರ ಮಾಡಬೇಕು. ಇನ್ನೊಬ್ಬರ ಒಳಿತನ್ನು ಬಯಸಲು ತಂದೆಯವರು ಉಪದೇಶ ಮಡುತ್ತಿದ್ದರು. ಅವರ ಉಪದೇಶ ಮತ್ತು ಸೇವೆಯನ್ನು ನೋಡಿ ನಾವು ಅದನ್ನು ಮುಂದುವರಿಸಿದ್ದೇವೆ. ಇಂದು ತಂದೆ ಮತ್ತು ತಾಯಿ ನಮ್ಮ ಜೊತೆ ಇಲ್ಲದಿರುವುದು ಬಹುದೊಡ್ಡ ನಷ್ಟ. ಅವರು ಇದ್ದಿದ್ದರೆ ಈಗ ಸಂತೋಷ ಪಡುತಿದ್ದರು ಎಂದರು.

ಇದೇ ಸಂದರ್ಭದಲ್ಲಿ ಕರ್ನಿರೆ ಜುಮಾ ಮಸೀದಿಯ ಹಾಗೂ ಕರ್ನಿರೆಯ ಖಿದ್ಮ ಯಂಗ್‌ಮೆನ್ಸ್ ಅಸೋಸಿಯೇಶನ್ ವತಿಯಿಂದ ಕೆ.ಎಸ್. ಶೇಖ್ ಅವರನ್ನು ಯು.ಟಿ. ಖಾದರ್ ಸನ್ಮಾನಿಸಿದರು.

ಮನೆಯ ವಿನ್ಯಾಸಗೊಳಿಸಿದ ಡಿಸೈನ್ ಪ್ಲಸ್ ಆರ್ಕಿಟೆಕ್‌ನ ಅಬ್ದುಲ್ ಜಲೀಲ್ ಎಂ.ಎಚ್, ಗುತ್ತಿಗೆದಾರ ಎಚ್.ಎನ್.ಜಿಸಿ ಹುಸೈನ್, ಮೇಲ್ವಿಚಾರಕ ರಮೇಶ್ ಕೋಟ್ಯನ್ ಅವರನ್ನು ಗೌರವಿಸಲಾಯಿತು.

ಕರ್ನಿರೆ ಜುಮಾ ಮಸೀದಿ ಖತೀಬ್ ಉಮರುಲ್ ಫಾರೂಕ್ ದುವಾ ನೆರವೇರಿಸಿದರು. ಕುಟುಂಬದ ಹಿರಿಯರಾದ ಎಂ.ಕೆ. ಅಬ್ದುಲ್ ಹಮೀದ್ ಮೂಲ್ಕಿ, ಕೆ.ಎಸ್. ಅಬೂಬಕ್ಕರ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಡಿ. ಪೂಂಜಾ, ಹರೀಶ್‌ಚಂದ್ರ ಶೆಟ್ಟಿ, ಕರ್ನಿರೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಆಲಿ, ಅಡ್ವೆ ಭಾಸ್ಕರ್ ಶೆಟ್ಟಿ, ಕೋಟೆ ಶೇಖಬ್ಬ ಕಣ್ಣಂಗಾರ್, ಟಿ.ಕೆ. ಮುಹಮ್ಮದ್ ಕೋಟೆ ಪಲಿಮಾರು, ಕರ್ನಿರೆ ಹರೀಶ್‌ಚಂದ್ರ ಶೆಟ್ಟಿ, ಖಿದ್ಮ ಯಂಗ್‌ಮೆನ್ಸ್ ನ ಅಧ್ಯಕ್ಷ ಖಿದ್ಮ ಬಿ.ಎನ್, ಇಸ್ಮಾಯಿಲ್,ಕೆ.ಎಸ್. ಅಶ್ಪಕ್ ಉಪಸ್ಥಿತರಿದ್ದರು.

ಕೆ.ಎಸ್. ಅಶ್ರಫ್ ಸ್ವಾಗತಿಸಿದರು. ಕೆ.ಎಸ್. ಅಬ್ದುಲ್ ರಹೀಂ ವಂದಿಸಿದರು. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರ್ವಹಿಸಿದರು.

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News