ತುಳು ಭಾಷೆ ಬಹಳ ವಿಸ್ತಾರವಾಗಿ ವ್ಯಾಪಿಸಲು ನಾಟಕಗಳೇ ಕಾರಣ: ತಾರಾನಾಥ ಗಟ್ಟಿ
ಉಡುಪಿ: ತುಳು ಭಾಷೆ ಬೇರೆ ಬೇರೆ ಸ್ವರೂಪಗಳಿಂದ ಉಳಿದು ಬೆಳೆದಿವೆ. ಅದರಲ್ಲಿ ನಾಟಕ ಅತ್ಯಂತ ಪ್ರಮುಖವಾದ ಅಂಗವಾಗಿದೆ. ತುಳು ಭಾಷೆ ಬಹಳ ವಿಸ್ತಾರವಾಗಿ ಮತ್ತು ಆಳವಾಗಿ ವ್ಯಾಪಿಸಲು ತುಳು ನಾಟಕಗಳೇ ಮುಖ್ಯ ಕಾರಣ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಡುಪಿ ತುಳುಕೂಟದ ಆಶ್ರಯದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ೨೩ನೇ ವರ್ಷದ ಕೆಮ್ತೂರು ದೊಡ್ಡಣ ಶೆಟ್ಟಿ ನೆನಪಿನ ತುಳು ನಾಟಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಹರಿಪ್ರಸಾದ್ ರೈ, ಅಖಿಲ ಭಾರತ ತುಳು ಒಕ್ಕೂಟದ ಉಪಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಮಾತನಾಡಿದರು. ಅಧ್ಯಕ್ಷತೆಯನ್ನು ತುಳುಕೂಟದ ಉಪಾಧ್ಯಕ್ಷ ಭುವನ ಪ್ರಸಾದ್ ಹೆಗ್ಡೆ ವಹಿಸಿದ್ದರು.
ವೇದಿಕೆಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್, ರಿಜಿಸ್ಟ್ರಾರ್ ಪೂರ್ಣಿಮಾ, ಕೆಮ್ತೂರು ಕುಟುಂಬದ ವಿಜಯ ಕುಮಾರ್ ಶೆಟ್ಟಿ, ತುಳು ಕೂಟದ ಸ್ಥಾಪಕ ಅಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ಉಪಾಧ್ಯಕ್ಷೆ ರಶ್ಮೀ ಆರ್.ಶೆಣೈ, ಕೋಶಾಧಿಕಾರಿ ಚೈತನ್ಯ ಎಂ.ಜಿ. ಉಪಸ್ಥಿತರಿದ್ದರು.
ತುಳುಕೂಟದ ಉಪಾಧ್ಯಕ್ಷ ದಿವಾಕರ ಸನಿಲ್ ಸ್ವಾಗತಿಸಿದರು. ನಾಟಕ ಸಂಚಾಲಕ ಪ್ರಭಾಕರ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಡಾ.ವಿ.ಕೆ.ಯಾದವ್ ಕಾರ್ಯಕ್ರಮ ನಿರೂಪಿಸಿದರು.