ಹಗರಣಗಳ ತನಿಖೆಯ ಹಾದಿ ತಪ್ಪಿಸಲು ಭ್ರಷ್ಟರ, ಸಿಬ್ಬಂದಿಗಳ ಪ್ರಯತ್ನ: ಗ್ರಾಪಂ ಸದಸ್ಯರ ಆರೋಪ

Update: 2025-01-03 15:33 GMT

ಉಡುಪಿ, ಜ.3: ಹೊಸ ವರ್ಷದ ಮೊದಲ ದಿನ ಸಿಬ್ಬಂದಿಗಳಿಂದಾಗಿ ಶಾಸನಬದ್ದ ಸ್ಥಳೀಯ ಆಡಳಿತ ಕಚೇರಿಗೆ ರಾಜಕೀಯ ಪ್ರೇರಿತವಾಗಿ ಬೀಗ ಜಡಿದು ಸಾರ್ವಜನಿಕ ಸೇವೆಗಳಿಗೆ ತೊಂದರೆಯನ್ನುಂಟು ಮಾಡಿರುವುದು ಬೈರಂಪಳ್ಳಿ ಗ್ರಾಪಂನಲ್ಲಿ ನಡೆದಿರುವ ಹಗರಣಗಳ ತನಿಖೆಯ ಹಾದಿ ತಪ್ಪಿಸುವ ಭ್ರಷ್ಟಾಚಾರಿಗಳು, ಕಳ್ಳರು ಹಾಗೂ ಭ್ರಷ್ಟ ಸಿಬ್ಬಂದಿಗಳ ಪ್ರಯತ್ನ ವಾಗಿದೆ ಎಂದು ಬೈರಂಪಳ್ಳಿ ಗ್ರಾಪಂನ ಸದಸ್ಯ ಡಾ.ಸಂತೋಷ ಕುಮಾರ್ ಹಾಗೂ ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ ಆರೋಪಿಸಿದ್ದಾರೆ.

ಜ.1ರಂದು ಅಪರಾಹ್ನ 12ಗಂಟೆಯವರೆಗೆ ಕಚೇರಿಗೆ ಬೀಗ ಜಡಿದ ಘಟನೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿದ ಸಂತೋಷ್, ಪಂಚಾಯತ್‌ನ ಮೂವರು ಸಿಬ್ಬಂದಿಗಳು ಡಿ.19ರಂದೇ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜಿನಾಮೆ ನೀಡಿದ್ದು ಡಿ.31 ಅವರ ಕೊನೆಯ ಕರ್ತವ್ಯದ ದಿನವಾಗಿತ್ತು. ಅದರಂತೆ ಅವರು ಅಂದು ಕಚೇರಿಯ ಬೀಗದಕೈಯನ್ನು ಗ್ರಾಪಂನ ಶಿಸ್ತು ಪ್ರಾಧಿಕಾರಿ ಅಧಿಕಾರಿಯಾದ ಪಿಡಿಓಗೆ ನೀಡದೇ ಅಧ್ಯಕ್ಷರ ಕೈಗೆ, ಅಧ್ಯಕ್ಷರ ಆದೇಶದಂತೆ ನೀಡಿದ್ದರು ಎಂದು ದೂರಿದರು.

ಅಧ್ಯಕ್ಷರು ಪಂಚಾಯತ್‌ನ ಬೀಗದ ಕೈಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಪಂಚಾಯತ್ ಸಿಬ್ಬಂದಿಯೊಬ್ಬರು ಹೋದಾಗ ಅವರಿಗೆ ನೀಡದೇ ಬೆದರಿಕೆ ಹಾಕಿ ಪಂಚಾಯತ್ ಬೀಗ ತೆರೆಯಲು ಬಿಡುವುದಿಲ್ಲ ಎಂದು ತಿಳಿಸಿದ್ದರು. ಇಂದು ಸಂವಿಧಾನದ ಪ್ರಕಾರ ಅಕ್ಷಮ ಅಪರಾಧವಾಗಿದೆ ಎಂದು ಡಾ.ಸಂತೋಷ್‌ಕುಮಾರ್ ವಿವರಿಸಿದರು.

ಜ.1ರಂದು ಬೆಳಗ್ಗೆ 10ಗಂಟೆಗೆ ತೆರೆಯಬೇಕಿದ್ದ ಕಚೇರಿಯ ಬಾಗಿಲನ್ನು ಅಧ್ಯಕ್ಷರು 12ಗಂಟೆಯವರೆಗೆ ತನ್ನ ನಾಟಕೀಯ ವರ್ತನೆಯಿಂದ ಹಾಗೂ ದೂರಾಲೋಚನೆಯಿಂದ ತೆರೆಯದೇ ಉದ್ದೇಶಪೂರ್ವಕವಾಗಿ ತಡ ಮಾಡಿ ದ್ದಾರೆ. ಬಳಿಕ ಈ ವಿಷಯವನ್ನು ತಾಪಂನ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಅವರನ್ನು ಸ್ಥಳಕ್ಕೆ ಕರೆಯಿಸಿ ಪಂಚಾಯತ್ ಬೀಗ ತೆರೆಯ ಲಾಗಿತ್ತು ಎಂದು ಹೇಳಿದರು.

ಇದು ಗ್ರಾಪಂನ ಕೆಲವು ಸದಸ್ಯರು, ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು ಹಾಗೂ ಭ್ರಷ್ಟ ಗುತ್ತಿಗೆದಾರರು ಸೇರಿ ಆಡಿರುವ ಕೃಪಾಪೋಷಿತ ನಾಟಕವಾಗಿದೆ. ಪಂಚಾಯತ್‌ನ ಸಿಬ್ಬಂದಿಗಳೂ ಇದರಲ್ಲಿ ಶಾಮೀಲಾಗಿ ರುವುದು ದುರದೃಷ್ಟಕರ. ಸಾರ್ವಜನಿಕರ ಹಣದ ಲೂಟಿಗೆ ಇವರೆಲ್ಲರೂ ಸೇರಿ ಮಾಡುತ್ತಿರುವ ಭ್ರಷ್ಟಾಚಾರದಿಂದ ಗ್ರಾಮಸ್ಥರಿಗೆ ತೊಂದರೆ ಉಂಟಾ ಗಿದೆ. ಇವರೊಂದಿಗೆ ಶಾಮೀಲಾಗಿ ಕರ್ತವ್ಯಚ್ಯುತಿ ಮಾಡಿರುವ ಸಿಬ್ಬಂದಿಗಳನ್ನು ಯಾವುದೇ ಕಾರಣಕ್ಕೂ ಮರುನೇಮಕ ಮಾಡಿಕೊಳ್ಳಬಾರದು ಎಂದು ಉಪಾಧ್ಯಕ್ಷರು ಸೇರಿದಂತೆ ಉಪಸ್ಥಿತರಿದ್ದ ಗ್ರಾಪಂ ಸದಸ್ಯರು ಆಗ್ರಹಿಸಿದರು.

ಬೈರಂಪಳ್ಳಿ ಗ್ರಾಪಂನಲ್ಲಿ ಕಳೆದ ಕೆಲವು ವರ್ಷಗಳಿಂದ ಹಗರಣಗಳು ನಡೆಯುತ್ತಿವೆ. 2021ರ ಜ.1ರಂದು ಪ್ರಾರಂಭ ಗೊಂಡ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. 2024ರ ಮಾ.15ರಂದು ಜಿಪಂ ಸಿಇಓ ಅವರಿಗೆ ತಾನು ಮೂರನೇ ಬಾರಿ ಸಲ್ಲಿಸಿದ ದೂರಿಗೆ ಸ್ಪಂಧಿಸಿ ಸಿಇಓ ಪ್ರತೀಕ್ ಬಾಯಲ್ ಅವರು ತನಿಖಾ ತಂಡ ವನ್ನು ರಚಿಸಿದ್ದು, ಸಮಿತಿ ಇದೀಗ ವರದಿಯನ್ನು ಸಲ್ಲಿಸಿದೆ. ಗ್ರಾಪಂನಲ್ಲಿ ನಡೆದಿರುವ ಭ್ರಷ್ಟಾಚಾರ ಸಾಬೀತಾಗಿದ್ದು, ಲೂಟಿ ಹೊಡೆದ ಹಣವನ್ನು ಮರು ಪಾವತಿ ಮಾಡುವಂತೆ ಆದೇಶ ನೀಡಿದ್ದಾರೆ ಎಂದರು.

ವಿವಿಧ ಕಾಮಗಾರಿಗಳ ಗುತ್ತಿಗೆದಾರರು, ಪಂಚಾಯತ್‌ನ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಹಿಂದಿನ ಪಿಡಿಓಗಳು, ಸಿಬ್ಬಂದಿಗಳು ಹಾಗೂ ಇಲಾಖಾ ಇಂಜಿನಿಯರ್‌ಗಳು ನೇರವಾಗಿ ಶಾಮೀಲಾಗಿ ಕೋಟ್ಯಾಂತರ ರೂ. ಹಂಚಿಕೆ ಮಾಡಿ ಕೊಂಡಿರುವುದು ಸಾಬೀತಾಗಿದೆ. ಇದರಿಂದ ಹತಾಶರಾಗಿ ತನಿಖೆಯ ಹಾದಿ ತಪ್ಪಿಸಿ, ತನಿಖೆಗೆ ಸಹಕರಿಸುತ್ತಿರುವ ಪಿಡಿಓ ಸುಮನಾರನ್ನು ಅಲ್ಲಿಂದ ವರ್ಗಾಯಿಸಲು ಎಲ್ಲರೂ ಸೇರಿಕೊಂಡು ಪ್ರಯತ್ನ ನಡೆಸುತಿದ್ದಾರೆ ಎಂದು ಡಾ.ಸಂತೋಷ್ ಆರೋಪಿಸಿದರು.

ಬೈರಂಪಳ್ಳಿ ಗ್ರಾಪಂ ಕಳೆದ 2 ದಶಕಗಳಿಗೂ ಅಧಿಕ ಸಮಯದಿಂದ ಬಿಜೆಪಿ ಬೆಂಬಲಿತ ಸದಸ್ಯರ ಆಡಳಿತದಲ್ಲಿದ್ದು, ಪ್ರಸಕ್ತ 3 ಮಂದಿ ಬಿಜೆಪಿ ಬೆಂಬಲಿತ ಹಾಗೂ 3 ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಅಮ್ಮಣ್ಣಿ ಶೆಟ್ಟಿ ಅಲ್ಲದೇ, ಸದಸ್ಯರಾದ ವಿಜಯಕುಮಾರ್, ವಿಜಯಶ್ರೀ ಭಟ್, ಗ್ರಾಮಸ್ಥರಾದ ಅನಿತ ಪೂಜಾರಿ ಹಾಗೂ ಕವಿತಾ ಉದಯ ಪೂಜಾರಿ ಉಪಸ್ಥಿತರಿದ್ದರು.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News