ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯಿಂದ ರಕ್ತ ಪರೀಕ್ಷಾ ಕೇಂದ್ರ, ಟಿಶ್ಯೂಪೇಪರ್ ಕೈಗಾರಿಕಾ ಘಟಕ ಪ್ರಾರಂಭ

Update: 2025-01-03 15:49 GMT

ಉಡುಪಿ, ಜ.3: ಸವಿತಾ ಸಮಾಜದ ಏಳಿಗೆ ಹಾಗೂ ಜಿಲ್ಲೆಯಾದ್ಯಂತ ನೆಲೆಸಿರುವ ಕ್ಷೌರಿಕರ ಆರ್ಥಿಕ ಅಭಿವೃದ್ಧಿ ಉದ್ದೇಶ ದೊಂದಿಗೆ 2007ರಲ್ಲಿ ಪ್ರಾರಂಭಗೊಂಡ ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ ಜಿಲ್ಲೆಯ ವಿವಿದೆಡೆ ಐದು ಶಾಖೆಗಳನ್ನು ಹೊಂದಿದ್ದು, ಇದೀಗ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಟಿಶ್ಯೂಪೇಪರ್ ಕೈಗಾರಿಕಾ ಘಟಕ ಹಾಗೂ ಸವಿತಾ ಡಯಾಗ್ನೋಸ್ಟಿಕ್ ಸೆಂಟರ್‌ನ್ನು ಪ್ರಾರಂಭಿಸುತ್ತಿದೆ ಎಂದು ಸಹಕಾರಿಯ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಹೊರವಲಯದ ಅಮ್ಮುಂಜೆಯಲ್ಲಿ ಸ್ಥಾಪಿಸಲಾಗಿರುವ ಟಿಶ್ಯೂ ಪೇಪರ್ ಕೈಗಾರಿಕಾ ಘಟಕ ಹಾಗೂ ಅಂಬಲಪಾಡಿಯಲ್ಲಿ ತೆರೆಯಲಾಗಿರುವ ಸವಿತಾ ಡಯಾಗ್ನೋಸ್ಟಿಕ್ ಸೆಂಟರ್ (ರಕ್ತ ಪರೀಕ್ಷಾ ಕೇಂದ್ರ)ನ ಉದ್ಘಾಟನೆಯು ಇದೇ ಜ.7ರ ಮಂಗಳವಾರ ನಡೆಯಲಿದೆ ಎಂದರು.

ಗ್ರಾಮೀಣ ಪ್ರದೇಶವಾದ ಅಮ್ಮುಂಜೆಯಲ್ಲಿ ಸ್ಥಾಪಿಸಲಾಗಿರುವ ಟಿಶ್ಯೂ ಪೇಪರ್ ತಯಾರಿಕಾ ಘಟಕದ ಮೂಲಕ ಗ್ರಾಮೀಣ ಭಾಗದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಉನ್ನತ ಗುಣಮಟ್ಟದ ಟಿಶ್ಯೂ ಪೇಪರ್‌ಗಳನ್ನು ಉತ್ಪಾದಿಸಿ ಕ್ಷೌರಿಕ ಸಮುದಾಯದ ಅಗತ್ಯತೆಗಳೊಂದಿಗೆ ಹೊಟೇಲ್, ಕ್ಯಾಟರಿಂಗ್ ಸೇರಿದಂತೆ ವಿವಿಧ ಉದ್ಯಮಗಳಿಗೆ ಸರಬರಾಜು ಮಾಡಲಾಗುವುದು. ಇಲ್ಲಿ ಪ್ರತಿದಿನ ಒಟ್ಟು ನಾಲ್ಕು ಮಾದರಿಯ 25,000 ಪ್ಯಾಕೇಟ್ ಟಿಶ್ಯೂಪೇಪರ್‌ಗಳನ್ನು ಉತ್ಪಾದಿಸಲಾಗುತ್ತದೆ ಎಂದು ನವೀನ್‌ಚಂದ್ರ ಭಂಡಾರಿ ತಿಳಿಸಿದರು.

ಕೈಗಾರಿಕಾ ಘಟಕವನ್ನು ಜ.7ರಂದು ಪೂರ್ವಾಹ್ನ 10:30ಕ್ಕೆ ಶಾಸಕ ಯಶಪಾಲ್ ಸುವರ್ಣ ಅಮ್ಮುಂಜೆಯಲ್ಲಿ ಉದ್ಘಾಟಿಸಲಿದ್ದು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಗೊಳಿಸುವರು. ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ, ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ರಾಜ್ಯ ಮದ್ಯಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ ಹೆಗ್ಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.

ಸಹಕಾರಿ ಚಳವಳಿ ಮೂಲಕ ಮೊದಲ ಬಾರಿ ಕ್ಲಿನಿಕಲ್ ಲ್ಯಾಬೋರೇಟರಿ ಅಂಬಲಪಾಡಿಯಲ್ಲಿ ಅದೇ ದಿನ ಅಪರಾಹ್ನ 3 ಗಂಟೆಗೆ ಉದ್ಘಾಟನೆ ಗೊಳ್ಳಲಿದೆ. ರಕ್ತ ಪರೀಕ್ಷಾ ಕೇಂದ್ರವನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಎಚ್. ಅಶೋಕ್ ಉದ್ಘಾಟಿಸುವರು. ಅಂಬಲಪಾಡಿಯ ಸವಿತಾ ಸಮಾಜ ಸಮುದಾಯ ಭವನದಲ್ಲಿ ನಡೆಯುವ ಸಭಾ ಕಾರ್ಯ ಕ್ರಮದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್.ಕೆ., ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ ಬಿ. ಎಸ್., ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿ ರುವರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಮಾಲತಿ ಅಶೋಕ್ ಭಂಡಾರಿ, ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ನಿರ್ದೇಶಕರಾದ ಸದಾಶಿವ ಬಂಗೇರ ಕುರ್ಕಾಲು, ರಾಜು ಸಿ.ಭಂಡಾರಿ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News