ದೇಶದೆಲ್ಲಡೆ ಗ್ರಂಥಾಲಯ ಆಂದೋಲನ ನಡೆಯಲಿ: ಡಾ.ಮಹಾಬಲೇಶ್ವರ ರಾವ್

Update: 2025-01-03 13:56 GMT

ಉಡುಪಿ, ಜ.3: ಜನರಲ್ಲಿ ಓದುವ ಹವ್ಯಾಸ ವೃದ್ಧಿ, ಜ್ಞಾನ ಗಳಿಕೆ, ವಿದ್ಯಾವಂತರಾಗಲು ಪೂರಕವಾಗಿ ಗ್ರಂಥಾಲಯ ಆಂದೋಲನ ನಡೆದಿಲ್ಲ. ಆ ನಿಟ್ಟಿನಲ್ಲಿ ದೇಶದೆಲ್ಲೆಡೆ ಗ್ರಂಥಾಲಯ ಆಂದೋಲನ ನಡೆಯಬೇಕಾಗಿದೆ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.

ಉಡುಪಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ವತಿಯಿಂದ ಮನೆಯೇ ಗ್ರಂಥಾಲಯ ಯೋಜನೆ ಯಡಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಸ್ಥಾಪಿಸಲಾದ 130ನೇ ಗ್ರಂಥಾಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಸ್, ರೈಲು, ವಿಮಾನ ನಿಲ್ದಾಣ, ಆಸ್ಪತ್ರೆ ಸಹಿತ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ವಿರಾಮ ಸಿಕ್ಕಾಗ ಓದಲು ಪುಸ್ತಕ ಭಂಡಾರ/ಗ್ರಂಥಾಲಯ ನಿರ್ಮಾಣವನ್ನು ಅಗತ್ಯ ಸೇವೆಯಾಗಿ ಪರಿಗಣಿಸಬೇಕು. ಆಧುನಿಕ ಡಿಜಿಟಲ್ ಮಾಧ್ಯಮ ಬಂದ ಮೇಲೆ ಪುಸ್ತಕ ಓದು ಕಡಿಮೆಯಾಗಿದೆ. ಪದವಿ ಪೂರ್ವ ಕಾಲೇಜಿನ ತನಕದ ವೇಳಾಪಟ್ಟಿಯಲ್ಲಿ ಗ್ರಂಥಾಲಯಯೇ ಇಲ್ಲ. ಗ್ರಂಥಾಲಯ ಗಳು ದುರ್ಬಲವಾಗಿವೆ. ಈ ನಿಟ್ಟಿನಲ್ಲಿ ಶಾಲೆಗೊಂದು ಗ್ರಂಥಾಲಯ ಅಭಿಯಾನ ಆಗಬೇಕು ಎಂದರು.

ಜಪಾನಿನ ಮಿಯಾಜಾಕಿ ವಿವಿಯ ಪ್ರೊಫೆಸರ್ ಡಾ.ಹರೀಶ್ ಕುಮಾರ್ ಮಧ್ಯಸ್ಥ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಥಬೀದಿ ಗೆಳೆಯರು ಸಂಸ್ಥೆ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ಮುಖ್ಯಸ್ಥ ಹಫೀಝ್ ರೆಹಮಾನ್, ಕಸಾಪ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಹಂದಾಡಿ, ಮಲಬಾರ್ ಗೋಲ್ಡ್ ಸಂಸ್ಥೆಯ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News