ಸಹಕಾರಿ ಯೂನಿಯನ್ ಸ್ವಂತ ಕಟ್ಟಡ ನಿರ್ಮಾಣಕ್ಕೆ ಯೋಜನೆ: ಜಯಕರ ಶೆಟ್ಟಿ ಇಂದ್ರಾಳಿ

Update: 2024-09-20 12:18 GMT

ಉಡುಪಿ, ಸೆ.20: ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಇದರ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಶುಕ್ರವಾರ ಅಜ್ಜರಕಾಡು ಪುರಭವನದ ಮಿನಿಹಾಲ್‌ನಲ್ಲಿ ಜರಗಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ಗೆ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದ್ದು, ಸಹಕಾರಿ ಮಹಾಮಂಡಲ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದೆ. ಉಡುಪಿ ಜಿಲ್ಲೆಯಲ್ಲಿ 2.10 ಕೋಟಿ ರೂ. ಶಿಕ್ಷಣ ನಿಧಿಯನ್ನು ಸಂಗ್ರಹಿಸಿ ಸಹಕಾರಿ ಮಹಾಮಂಡಲಕ್ಕೆ ನೀಡಲಾಗಿದೆ. ಈ ನಿಧಿಯನ್ನು ಶೇ.100 ಸಂಗ್ರಹಿಸುವ ಮೂಲಕ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಲಾವಣ್ಯ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ಯೂನಿಯನ್ ವತಿಯಿಂದ ಏರ್ಪಡಿಸಲಾದ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶತಮಾನೋತ್ಸವ ಆಚರಿಸಿದ ಹಾಗೂ ಸಹಕಾರಿ ಸಪ್ತಾಹದ ಸಹಯೋಗ ವಹಿಸಿ ಕೊಂಡ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವ ಹಣಾಧಿಕಾರಿಗಳನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಮಂಜಯ್ಯ ಶೆಟ್ಟಿ, ಹರೀಶ್ ಶೆಟ್ಟಿ, ಕೃಷ್ಣಮೂರ್ತಿ, ಸುರೇಶ್ ರಾವ್, ಕೆ.ಕೊರಗ ಪೂಜಾರಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಗೋಪಿಕೃಷ್ಣ ರಾವ್ ಉಪಸ್ಥಿತರಿದ್ದರು. ನಿರ್ದೇಶಕರಾದ ಎಚ್.ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಹರೀಶ್ ಕಿಣಿ ವಂದಿಸಿದರು. ಶ್ರೀಧರ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

ಪ್ರಬಂಧ-ಚರ್ಚಾ ಸ್ಪಧಾ ಫಲಿತಾಂಶ

ಯುವನಾಯಕತ್ವದಿಂದ ಮಾತ್ರವೇ ಸಹಕಾರ ವ್ಯವಸ್ಥೆ ಬಲಾಢ್ಯಗೊಳ್ಳಬಲ್ಲದು ಕುರಿತು ಚರ್ಚಾ ಸ್ಪರ್ಧೆಯಲ್ಲಿ ವಿಷಯದ ಪರವಾಗಿ ಉಡುಪಿ ಎಂಜಿಎಂ ಕಾಲೇಜಿನ ದಿವ್ಯ ಪ್ರಥಮ, ಕುಂಜಾರುಗಿರಿ ಪಾಜಕ ಆನಂದತೀರ್ಥ ಪದವಿ ಪೂರ್ವ ಕಾಲೇಜಿನ ರಿಷಬ್ ಹೆಬ್ಬಾರ್ ದ್ವಿತೀಯ, ವಿರೋಧವಾಗಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಶುೃತಿಕಾ ಶೆಟ್ಟಿ ಪ್ರಥಮ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಸಾಧನಾ ದೇವಾಡಿಗ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಶಾಲಾ ಕಾಲೇಜುಗಳ ಪಠ್ಯ ವಿಷಯಗಳಲ್ಲಿ ಸಹಕಾರ ವಿಷಯ ಅಳವಡಿಕೆ ಕುರಿತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿ ಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ವಿಶ್ವ ಪ್ರಥಮ, ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಗೌತಮಿ ಗೋಪಾಲ ದ್ವಿತೀಯ, ಶಂಕರನಾರಾಯಣ ಸರಕಾರಿ ಪ್ರೌಢಶಾಲೆಯ ಕೃತಿ ತೃತೀಯ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News