ಹೊಟ್ಟೆ ಕಿಚ್ಚಿನಿಂದ ಸಂಸ್ಕೃತ ಭಾಷೆಯ ಬಗ್ಗೆ ವಿವಾದ: ಪುತ್ತಿಗೆ ಶ್ರೀ

Update: 2024-09-20 12:27 GMT

ಉಡುಪಿ, ಸೆ.20: ಸಂಸ್ಕೃತ ಭಾಷೆ ಬಗ್ಗೆ ಏನು ಮಾತಾಡಿದರೂ ವಿವಾದ ಮಾಡುತ್ತಿದ್ದಾರೆ. ಯಾಕೆಂದರೆ ಅವರಿಗೆ ಅದರ ಬಗ್ಗೆ ಇರುವ ಹೊಟ್ಟೆಕಿಚ್ಚು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಜ್ಯ ಸಂಸ್ಕೃತ ಭಾಷಾ ಶಿಕ್ಷಕ ಸಂಘ ಬೆಂಗಳೂರು ಸಹಕಾರದೊಂದಿಗೆ ಉಡುಪಿ ಜಿಲ್ಲಾ ಸಂಸ್ಕೃತ ಶಿಕ್ಷಕ ಸಂಘ ಆಯೋಜಿಸಲಾದ ಸಂಸ್ಕೃತೋತ್ಸವ ಮತ್ತು ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಯಾವ ಭಾಷೆಗೂ ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಸಂಸ್ಕೃತ ಭಾಷೆಯನ್ನು ಹೆಚ್ಚು ಸಂಪೋಷಣೆ ಮಾಡಿದಷ್ಟು ಉಳಿದ ಭಾಷೆಗಳು ಹೆಚ್ಚು ಬೆಳೆಯುತ್ತ ಹೋಗುತ್ತವೆ. ತಾಯಿಯಂತೆ ಪೊರೆಯುವ ಗುಣ ಸಂಸ್ಕೃತದ್ದು. ಭಾಷಾ ಕಲಿಕೆಗೊಂದು ಮೂಲಭೂತ ಚೌಕಟ್ಟು ಸಂಸ್ಕೃತದಿಂದ ಪಡೆದರೆ ಉಳಿದ ಯಾವುದೇ ಭಾಷಾಕಲಿಕೆ ಕೂಡ ಸುಲಭ ಸಾಧ್ಯ. ವಿದೇಶಿಯರು ಸಂಸ್ಕೃತದ ಬಗ್ಗೆ ಹೆಚ್ಚು ಆಸಕ್ತಿ ಪ್ರೀತಿ ಹೊಂದಿದ್ದಾರೆ. ಲಂಡನ್ ನಲ್ಲಿ ಹಿಬ್ರು ಭಾಷೆ ಯನ್ನು ರದ್ದು ಮಾಡಿ ಅದರ ಬದಲಿಗೆ ಸಂಸ್ಕೃತ ಕಲಿಸುತ್ತಿದ್ದಾರೆ ಎಂದರು.

ಕಳೆದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತ ಭಾಷಾ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಮಾರು 230 ವಿದ್ಯಾರ್ಥಿ ಗಳಿಗೆ ಪುರಸ್ಕಾರ ನೀಡಲಾಯಿತು.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಕೆ.ಗಣಪತಿ, ಡಯಟ್ ಸಂಸ್ಥೆಯ ಉ ಪ್ರಾಂಶುಪಾಲ ಅಶೋಕ್ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಸಂಸ್ಕೃತಾಭಿಮಾನಿ ದಾನಿ ನಿರಂಜನ್ ಚೋಳಯ್ಯ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ವಿದ್ವಾಂಸ ನಿವೃತ್ತ ಪ್ರಾಂಶುಪಾಲ ಮಧುಸೂದನ ಭಟ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಹೆಗಡೆ ವಂದಿಸಿದರು. ಶಿಕ್ಷಕ ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News