ಉಡುಪಿ| ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕುಕ್ಕುಜೆ ಶಾಲೆಯ ಅಮೂಲ್ಯ ಹೆಗ್ಡೆ

Update: 2024-09-20 14:19 GMT

ಉಡುಪಿ, ಸೆ.20: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಹೊಸದಿಲ್ಲಿಯಲ್ಲಿ ನಡೆಸಿದ ರಾಷ್ಟ್ರ ಮಟ್ಟದ ವಿಜ್ಞಾನ ಮಾಡೆಲ್ ತಯಾರಿಕೆಯ ‘ಇನ್‌ಸ್ಪಾಯರ್ ಮಾನಕ್ ಅವಾರ್ಡ್’ ಸ್ಪರ್ಧೆ ಯಲ್ಲಿ ಕಾರ್ಕಳ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶದ ಕುಕ್ಕುಜೆಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ದೇಶಕ್ಕೇ ಮೂರನೇ ಸ್ಥಾನ ಪಡೆದು, ಕಂಚಿನ ಪದಕ ಗೆದ್ದುಕೊಂಡಿದ್ದಾಳೆ.

ಈ ಮೂಲಕ ಅಮೂಲ್ಯ ಹೆಗ್ಡೆ ಜಪಾನ್ ದೇಶದಲ್ಲಿ ನಡೆಯುವ ‘ಸುಕುರಾ’ ಅಂತರ್‌ರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತ ವನ್ನು ಪ್ರತಿನಿಧಿಸುವ ಅರ್ಹತೆ ಯನ್ನು ಸಂಪಾದಿಸಿದ್ದು, ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯೊಂದರ ವಿದ್ಯಾರ್ಥಿನಿ ಇಂಥ ವಿಶೇಷ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾರೆ.

ದೇಶಕ್ಕೇ ಮೂರನೇ ಸ್ಥಾನ: ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿ ಬಂದಿದ್ದ ಒಟ್ಟು 377 ಸ್ಪರ್ಧಿಗಳಲ್ಲಿ ಅಂತಿಮ ಸುತ್ತಿಗೆ 30 ಮಂದಿ ವಿದ್ಯಾರ್ಥಿಗಳು ತಯಾರಿಸಿದ ಮಾಡೆಲ್‌ಗಳನ್ನು ಆಯ್ಕೆ ಮಾಡಿ ಇವರಲ್ಲಿ ಅಂತಿಮ ಸ್ಥಾನಮಾನ ಗಳಿಗಾಗಿ ಸ್ಪರ್ಧೆ ನಡೆಸಲಾಗಿತ್ತು.

ಈ 30 ಮಾಡೆಲ್‌ಗಳಲ್ಲಿ ಅಮೂಲ್ಯ ಹೆಗ್ಡೆ ರಚಿಸಿದ ‘ಫ್ಲಡ್ ಡಿಟೆಕ್ಟಿಂಗ್ ಪೋಲ್’ ಎಂಬ ಅತ್ಯಂತ ವಿನೂತನ ಅನ್ವೇಷಣೆಯು ದೇಶಕ್ಕೇ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕಕ್ಕೆ ಭಾಜನವಾಗಿದೆ. ಈ ಮೂಲಕ ಅವರು ಜಪಾನ್‌ನ ಅಂತರ್‌ ರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನ ‘ಸುಕುರಾ’ದಲ್ಲಿ ಭಾರತವನ್ನು ಪ್ರತಿನಿಧಿಸುವ ಅಪರೂಪದ ಸುವರ್ಣವಕಾಶ ವನ್ನು ಪಡೆದಿದ್ದಾರೆ!

ಒಂದೇ ಶಾಲೆಯ ಇಬ್ಬರು ರಾಷ್ಟ್ರಮಟ್ಟಕ್ಕೆ: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಕುಕ್ಕುಜೆಯ ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಅಗ್ರಸ್ಥಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ ತೇರ್ಗಡೆ ಗೊಂಡಿದ್ದರು. ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಅಮೂಲ್ಯ ಹೆಗ್ಡೆ ಹಾಗೂ ನಿಕಿತಾ ಈ ಸಾಧನೆ ಮಾಡಿದ ಪ್ರತಿಭೆಗಳು.

ಅಮೂಲ್ಯ ಹೆಗ್ಡೆ ಅವರು ‘ಫ್ಲಡ್ ಡಿಟೆಕ್ಟರ್’ ಮಾದರಿ ರಚಿಸಿದ್ದರೆ, ನಿಕಿತಾ ‘ರೋಪೋ ಮೀಟರ್’ ಮಾದರಿ ನಿರ್ಮಿಸಿದ್ದು, ಇವರಲ್ಲಿ ಅಮೂಲ್ಯ ಅವರ ಆವಿಷ್ಕಾರ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವರಿಬ್ಬರು ಶಾಲೆಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಶಿಕ್ಷಕ ಸುರೇಶ್ ಮರಕಾಲರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.

ಒಂದೇ ಸರಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ರಾಷ್ಟ್ರಮಟ್ಟದ ‘ಇನ್‌ಸ್ಪಾಯರ್’ ಸ್ಪರ್ಧೆಗೆ ಆಯ್ಕೆಯಾಗಿದ್ದು ದೇಶದ ಇತಿಹಾಸದಲ್ಲೇ ಮೊದಲು! ಜೊತೆಗೆ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಕಂಚಿನ ಪದಕ ಪಡೆದಿರುವುದು ಉಡುಪಿ ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲು!

ಪ್ರಶಸ್ತಿ ಪ್ರಧಾನ ಸಮಾರಂಭ: ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಿನ್ನೆ ನಡೆದ ಭವ್ಯ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಪ್ರೊ. ಅಭಯ್ ಕರಂದಿಕರ್, ನ್ಯಾಶನಲ್ ಇನ್ನೋವೇಶನ್ ಫೌಂಡೇಶನ್‌ನ ಮುಖ್ಯಸ್ಥರಾದ ಪ್ರೊ. ಅನಿಲ್ ಡಿ. ಸಹಸ್ರಬುದ್ಧೆ, ನ್ಯಾಶನಲ್ ಇನ್ನೋವೇಶನ್ ಫೌಂಡೇಶನ್‌ನ ನಿರ್ದೇಶಕ ಡಾ. ಅರವಿಂದ್ ಸಿ ರಾನಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮುಖ್ಯಸ್ಥರಾದ ನಮಿತಾ ಗುಪ್ತಾ ಇವರು ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು.

ಅಭಿನಂದನೆಗಳ ಮಹಾಪೂರ..!

ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಯೊಬ್ಬರ ಈ ಅಪರೂಪದ ಸಾಧನೆಗೆ ಹಾಗೂ ಶಾಲೆಯ ಶಿಕ್ಷಕರು ನೀಡಿದ ಪ್ರೇರಣೆೆ ಹಾಗೂ ಮಾರ್ಗದರ್ಶನಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ, ಡಯಟ್ ಪ್ರಾಂಶುಪಾಲರಾದ ಗೋವಿಂದ ಮಡಿವಾಳ, ಉಪಪ್ರಾಂಶು ಪಾಲರಾದ ಡಾ.ಅಶೋಕ್ ಕಾಮತ್, ಇನ್‌ಸ್ಪಾಯರ್ ಮಾನಕ್‌ಗೆ ಜಿಲ್ಲಾ ನೋಡಲ್ ಅಧಿಕಾರಿ ಸುಬ್ರಹ್ಮಣ್ಯ ಭಟ್, ಕಾರ್ಕಳ ಬಿಇಓ. ಲೋಕೇಶ್, ಶಾಲೆಯ ಪ್ರಾಂಶುಪಾಲರು, ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಎಸ್‌ಡಿಎಂಸಿ, ಎಸ್‌ಬಿಸಿ, ಗ್ರಾಮ ಪಂಚಾಯತ್, ಪೋಷಕರು, ಹಳೆವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

‘ಅತ್ಯಂತ ಗ್ರಾಮೀಣ ಭಾಗದ ಒಂದು ಸರಕಾರಿ ಶಾಲೆ ಇಂತಹಾ ಸಾಧನೆ ಮಾಡಿರುವುದು ಇಲಾಖೆಗೇ ಅಭಿಮಾನ ಮೂಡಿಸುವ ಸಂಗತಿಯಾಗಿದೆ. ಇನ್‌ಸ್ಪಾಯರ್ ಅವಾರ್ಡ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು, ಅಂತರ್‌ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಹಾಗೂ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ರಿಗೆ ಹಾರ್ದಿಕ ಶುಭಾಶಯಗಳು. ಕುಕ್ಕುಜೆ ಶಾಲೆಯ ಸಮಸ್ತ ಶಿಕ್ಷಕ ವೃಂದಕ್ಕೆ ಶುಭಾಶಯಗಳು. ಇಂತಹಾ ಸಾಧನೆ ಪ್ರತೀ ಶಾಲೆಗಳಲ್ಲೂ ಆಗುವಂತಾಗಲಿ.

- ಗಣಪತಿ ಕೆ., ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ರತಾ ಇಲಾಖೆ, ಉಡುಪಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News