ಚುನಾವಣೆ| ಉಡುಪಿ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿ ಸೂಚನೆ

Update: 2024-09-20 15:27 GMT

ಉಡುಪಿ, ಸೆ.20: ವಿಧಾನಪರಿಷತ್ ಉಪ ಚುನಾವಣೆ ಘೋಷಣೆ ಯಾಗಿದ್ದು, ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಹಾಗೂ ಚುನಾವಣಾ ಆಯೋಗ ನೀಡುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ವಿಧಾನಪರಿಷತ್ ಉಪ ಚುನಾವಣೆಯನ್ನು ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯ ಚಟುವಟಿಕೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕರಿಸಬೇಕು ಎಂದರು.

ಜನಪ್ರತಿನಿಧಿಗಳು ಸ್ಥಳೀಯ ಪ್ರಾಧಿಕಾರ ಕ್ಷೇತ್ರದ ಮತದಾರರ ಭಾಗವಾ ಗಿರುವ ಯಾವುದೇ ಸ್ಥಳೀಯ ಪ್ರಾಧಿಕಾರದ ಸದಸ್ಯರನ್ನು, ಯಾವುದೇ ಸಚಿವರು, ಅಧಿಕೃತವಾಗಿ ಸಭೆ, ವೀಡಿಯೋ ಕಾನ್ಫರೆನ್ಸ್‌ಗೆ ಕರೆಯುವಂತಿಲ್ಲ. ಸ್ಥಳೀಯ ಸಂಸ್ಥೆ ಗಳ ವಾಡಿಕೆಯ ಸಭೆಗಳು ಅಗತ್ಯವಿದ್ದಾಗ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಚುನಾವಣಾ ಅಧಿಕಾರಿಗಳ ಪೂರ್ವಾನುಮತಿ ಪಡೆದು ನಡೆಸಬಹುದಾಗಿದೆ ಎಂದರು.

ಮತದಾರರ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಯಾವುದೇ ಹೊಸ ನೀತಿ ಘೋಷಣೆ ಅಥವಾ ಕಾರ್ಯಕ್ರಮವನ್ನು ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಸರಕಾರಿ ಇಲಾಖೆಗಳು ಪ್ರಾರಂಭಿಸು ವಂತಿಲ್ಲ ಎಂದ ಅವರು, ಸರಕಾರಿ ಯಂತ್ರವನ್ನು ದುರ್ಬಳಕೆ ಮಾಡುವಂತಿಲ್ಲ ಎಂದರು.

ಸಾರ್ವಜನಿಕ ಸ್ಥಳ ಅಥವಾ ಮೈದಾನಗಳಲ್ಲಿ ಚುನಾವಣಾ ಸಭೆ ನಡೆಸಲು ಹೆಲಿಕಾಪ್ಟರ್‌ಗಳಿಗೆ ಸ್ಥಳಾವಕಾಶ ಒದಗಿಸಲು ಅಧಿಕಾರದಲ್ಲಿರುವ ಪಕ್ಷದವರು ಏಕಸ್ವಾಮ್ಯವನ್ನು ಹೊಂದಿರುವುದಿಲ್ಲ. ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳೂ ಸಹ ಅವು ಗಳನ್ನು ಬಳಕೆ ಮಾಡಲು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಚುನಾವಣಾ ಜಾಹಿರಾತುಗಳನ್ನು ಮುದ್ರಿಸುವ ಮುನ್ನ ಪೂರ್ವಾನುಮತಿ ಯನ್ನು ಜಿಲ್ಲಾ ಎಂಸಿಎಂಸಿ ಸಮಿತಿಯಿಂದ ಪಡೆದು ಟಿವಿ ಚಾನೆಲ್, ಕೇಬಲ್ ನೆಟ್‌ವರ್ಕ್, ರೇಡಿಯೋ ಸೇರಿದಂತೆ ಖಾಸಗಿ ಎಫ್.ಎಂ ಚಾನೆಲ್‌ಗಳು, ಸಿನಿಮಾ ಹಾಲ್‌ಗಳು, ಆಡಿಯೋ ವಿಷುಯಲ್ ಡಿಸ್‌ಪ್ಲೇಗಳನ್ನು ಹಾಗೂ ಬಲ್ಕ್ ಎಸ್‌ಎಂಎಸ್ ಧ್ವನಿ ಸಂದೇಶಗಳನ್ನು ಮಾಡಬಹುದಾಗಿದೆ ಎಂದರು.

ಪ್ರಚಾರ ಕಾರ್ಯಕ್ಕೆ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸು ವಂತಿಲ್ಲ. ಹುಟ್ಟುಹಬ್ಬ ಮತ್ತಿತರ ಸಮಾರಂಭ ಗಳನ್ನು ನಡೆಸಿ, ಮತದಾರರನ್ನು ಸೆಳೆಯಲು ಊಟೋಪಚಾರಗಳು, ಪಾರ್ಟಿಗಳನ್ನು ಏರ್ಪಡಿಸಿದ್ದಲ್ಲಿ ಕಾನೂನು ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರಕಾರಿ ಅಧಿಕಾರಿಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದೊಮ್ಮೆ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮವನ್ನು ಕಾನೂನಿನ ಅಡಿಯಲ್ಲಿ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಎಎಸ್‌ಪಿ ಸಿದ್ಧಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ., ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಚಂದ್ರಶೇಖರ ಪ್ರಭು, ಹಬೀಬ್ ಅಲಿ, ಖಾದರ್ ಹಾಗೂ ಜಯಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News