ಉಡುಪಿ| ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಲು ಸೂಚನೆ

Update: 2024-09-20 15:25 GMT

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣಗಳು ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಸೋಂಕು ಇರುವ ಆಹಾರ ಅಥವಾ ಕಲುಷಿತ ನೀರಿನ ಸೇವನೆಯಿಂದ ಕಾಲರಾ ಬ್ಯಾಕ್ಟಿರೀಯಾ ದೇಹ ಪ್ರವೇಶಿಸುತ್ತದೆ. ಆದುದರಿಂದ ಮನೆಗೆ ತರುವ ಎಲ್ಲಾ ರೀತಿಯ ತರಕಾರಿ, ಹಣ್ಣು ಹಾಗೂ ಸಮುದ್ರ ಉತ್ಪನ್ನಗಳನ್ನು ಚೆನ್ನಾಗಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ ಬಳಸಬೇಕು ಎಂದು ಉಡುಪಿ ನಗರಸಭಾ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.

ಕಾಲರಾ ರೋಗದ ಬಗ್ಗೆ ಸಾರ್ವಜನಿಕರು ಮುಂಜಾಗೃತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಕುಡಿಯಲು ಬಿಸಿ ನೀರನ್ನೇ ನೀಡಬೇಕು. ಹೊಟೇಲ್‌ಗಳಲ್ಲಿ ಬಳಸುವ ಲೋಟ, ತಟ್ಟೆ ಹಾಗೂ ಪಾತ್ರೆಗಳನ್ನೂ ಬಿಸಿ ನೀರಿನಲ್ಲಿ ತೊಳೆಯಬೇಕು. ಯಾವುದೇ ಸಮುದ್ರದ ಉತ್ಪನ್ನ ಗಳನ್ನು ಮುಟ್ಟಿದಾಗ ಸರಿಯಾಗಿ ಕೈತೊಳೆದು ನಂತರ ಆಹಾರ ಸೇವಿಸಬೇಕು.

ಸಾರ್ವಜನಿಕರು ರಸ್ತೆ ಬದಿಯಲ್ಲಿ ಮಾರಾಟ ಮಾಡುವ ತಿನಿಸು, ತಳ್ಳುಗಾಡಿ ಯಲ್ಲಿ ಮಾರಾಟ ಮಾಡುವ ಆಹಾರ ಹಾಗೂ ಹಣ್ಣುಗಳನ್ನು ಸೇವಿಸಬಾರದು. ಶಾಲಾ-ಕಾಲೇಜು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸ್ವಚ್ಛವಾಗಿ ತೊಳೆದು ಆಹಾರ ಉತ್ಪನ್ನ ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಬಸ್‌ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಶೌಚಾಲಯ ಗಳಲ್ಲಿ ನೈರ್ಮಲ್ಯವನ್ನು ಕಾಪಾಡಬೇಕು ಎಂದರು.

ಕಾಲರಾ ಒಂದು ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದೆ. ವಾಕರಿಕೆ ಅನುಭವ, ಹಠಾತ್ ಅತಿಸಾರ, ಸೌಮ್ಯದಿಂದ ತೀವ್ರ ರೀತಿಯ ನಿರ್ಜಲೀಕರಣ, ವಾಂತಿ, ಆಯಾಸ, ಒಣಬಾಯಿ, ದಣಿವು, ತೀವ್ರ ಬಾಯಾರಿಕೆ ಇದು ಕಾಲರಾ ರೋಗದ ಲಕ್ಷಣವಾಗಿದೆ. ಮಕ್ಕಳಲ್ಲಿ ತೀವ್ರ ನಿದ್ರಾಹೀನತೆ, ಜ್ವರ, ಸೆಳೆತದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News