ಕಾಪು: ಕೊರಗರಿಗಾಗಿ ಕಾನೂನು ಅರಿವು ಕಾರ್ಯಕ್ರಮ

Update: 2024-09-23 15:39 GMT

ಕಾಪು, ಸೆ.23: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ- ಕೇರಳ ಮತ್ತು ನ್ಯಾಯಕೂಟ ಇವರ ಆಶ್ರಯದಲ್ಲಿ ಕೊರಗ ಸಮುದಾಯದವರಿಗಾಗಿ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ಕುರಿತ ಸಬಲೀಕರಣ ತರಬೇತಿಯನ್ನು ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲ್‌ನಲ್ಲಿ ರವಿವಾರ ಆಯೋಜಿಸಲಾಗಿತ್ತು.

ನ್ಯಾಯವಾದಿ ಆಗಿರುವ ಉಡುಪಿಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಕಾನೂನು ನೆರವು ಅಭಿರಕ್ಷಕ ರಾಗಿರುವ ಭಾನುಮತಿ ಎಂ. ಆರ್. ನಾಯರಿ ಇವರು ‘ಮಹಿಳಾ ಹಕ್ಕುಗಳು ಸಾಂವಿಧಾನಿಕ ಅವಕಾಶಗಳು’ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.

ಮಹಿಳೆಯರ ಹಕ್ಕುಗಳ ವಿಷಯಗಳಲ್ಲಿ ಸರಿಯಾದ ಮಾಹಿತಿಯನ್ನು ನಾವು ಪಡೆದುಕೊಳ್ಳಬೇಕು. ಇದರಿಂದ ಹಿಂಸೆಗಳು, ದೌರ್ಜನ್ಯ, ಅತ್ಯಾಚಾರಗಳು ಅಥವಾ ಅಪರಾಧ ನಡೆದಲ್ಲಿ ಇವುಗಳ ಬಗ್ಗೆ ದೂರು ದಾಖಲಿಸಲು ನಮಗೆ ಕಾನೂನುಗಳು ನೆರವಾಗುತ್ತದೆ. ಇದಕ್ಕಾಗಿ ಪ್ರಚಲಿತದಲ್ಲಿರುವ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಅದಕ್ಕೆ ಸರಿಯಾದ ತಿಳುವಳಿಕೆ ಯನ್ನು ಪಡೆದು ಕೊಂಡರೆ ಅಂತಹ ಸಮಸ್ಯೆಗಳು ಎದುರಾದಾಗ ಬಗೆಹರಿಸಿಕೊಳ್ಳಬಹುದು ಎಂದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಉಪಕಾನೂನು ನೆರವು ಅಭಿರಕ್ಷಕ ಶ್ರೀನಿವಾಸ ಉಪಾಧ್ಯ ಅವರು ‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ’ ಕುರಿತು ಮಾಹಿತಿ ನೀಡಿದರು. ಕೌಟುಂಬಿಕ ವಿಷಯದಲ್ಲಿ ಕುಟುಂಬದ ಸದಸ್ಯರುಗಳು ಹಲ್ಲೆ ಮಾಡಿದ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಆಶಾ ಕಾರ್ಯಕರ್ತರಲ್ಲಿ ದೂರುಗಳನ್ನು ನೀಡಬಹುದು. ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳುವ ಮೂಲಕ ಅಪರಾಧಿಗೆ ಶಿಕ್ಷೆ ನೀಡಬಹುದು ಎಂದರು.

ಸಮುದಾಯ ಕಾರ್ಯಕರ್ತೆ ದೀಪಿಕಾ ಮಣಿಪಾಲ ಇವರು ಹಿಂದೂ ವಿವಾಹ ಕಾಯ್ದೆ ಮತ್ತು ವಿಶೇಷ ವಿವಾಹ ಕಾಯ್ದೆ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.

ಸುಜಾತ ಕಾಸರಗೋಡು ಅತಿಥಿಗಳನ್ನು ಸ್ವಾಗತಿಸಿದರೆ ವಿಮಲ ಕಳ್ತೂರು ಹಾಗೂ ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ವಂದಿಸಿದರು. ಈ ಸಂದರ್ಭ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಸಂಯೋಜಕರಾದ ಪುತ್ರನ್ ಹೆಬ್ರಿ, ದಿವಾಕರ ಕಳ್ತೂರು ಅಲ್ಲದೇ, ಹೆಬ್ರಿ, ಕಾಪು, ಕಿನ್ನಿಗೋಳಿ, ಕಳತ್ತೂರು ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News