ಕಾರ್ಕಳ: ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ; ಸನ್ಮಾನ

Update: 2024-09-23 15:52 GMT

ಕಾರ್ಕಳ: ಆಡಳಿತ ಮಂಡಳಿಯವರಿಗೆ ಇಛ್ಚಾಶಕ್ತಿಯಿಂದ ಮತ್ತು ನೌಕರ ವರ್ಗದವರು ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ದಕ್ಷತೆಯಿಂದ ನಗುಮುಖದ ಸೇವೆ ನೀಡಿ, ತನ್ನ ಕುಟುಂಬವನ್ನು ಪ್ರೀತಿಸಿದಂತೆ ಸಂಸ್ಥೆಯನ್ನು ಪ್ರೀತಿ ಮುನ್ನಡೆಸಿದರೆ ಸಂಸ್ಥೆಯ ಉನ್ನತಿ ಸಾಧ್ಯ ಎಂದು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರಾದ ಅರುಣ್‌ ಕುಮಾರ್‌ ಹೇಳಿದರು.

ಅವರು ಸೋಮವಾರ ಕಾರ್ಕಳದ ಪ್ರಕಾಶ್ ಹೊಟೇಲ್ ಸಭಾಂಗಣದಲ್ಲಿ ನಡೆದ ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದ ವತಿಯಿಂದ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.

ಹೂವಿನ ಬೆಳೆಗಾರರ ಸಹಕಾರಿ ಸಂಘ ರಾಜ್ಯದ ಒಂದು ವಿಶಿಷ್ಟ ಪರಿಕಲ್ಪನೆ, ಮಾದರಿ ಸಂಸ್ಥೆಯಾಗಿದೆ. ಎಲ್ಲರೂ ಸೇರಿ ಕಟ್ಟಿ ಬೆಳೆಸಿದರೆ ದೊಡ್ಡ ಸಹಕಾರಿ ಸಂಸ್ಥೆಯಾಗಿ ಕಟ್ಟಲು ಮುಕ್ತ ಅವಕಾಶವಿದೆ ಎಂದು ಶುಭಹಾರೈಸಿದರು.

ಹೂವಿನ ಬೆಳೆಗಾರರಿಗೆ ಸಹಕಾರದ ಜೊತೆ ಬ್ಯಾಂಕಿಂಗ್ ವ್ಯವಹಾರ : ಫ್ರಾನ್ಸಿಸ್ ಡಿಸೋಜ

ರಾಜ್ಯದಲ್ಲಿ ಹೊಸ ಕಲ್ಪನೆಯಾಗಿರುವ ಹೂವಿನಬೆಳೆಗಾರರ ಸಹಕಾರ ಸಂಘವು ಹೂವಿನ ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರದ ಗಮನ ಸೆಳೆದು ಸಿಗುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ, ಸಹಕಾರ, ಸೇವೆಯ ಮೂಲಕ ಪ್ರಸಿದ್ಧಿ ಪಡೆದು ಉಡುಪಿ ಜಿಲ್ಲಾ ಮಟ್ಟದ ಮಾನ್ಯತೆ ಪಡೆದು ಕಾರ್ಕಳದಲ್ಲಿ ಕೇಂದ್ರ ಕಚೇರಿಯ ಜೊತೆಗೆ ಹಣ ಕಾಸು ವ್ಯವಹಾರ ನಡೆಸುತ್ತಿದೆ, ಹೆಬ್ರಿಯಲ್ಲೂ ಶಾಖೆಯನ್ನು ಹೊಂದಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಶಾಖೆಯನ್ನು ತೆರೆಯುವ ಉದ್ದೇಶವನ್ನು ಹೊಂದಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಶಾಖೆಯನ್ನು ಸಂಪೂರ್ಣ ಗಣಕೀಕರಣ ಗೊಳಿಸಲಾಗಿದೆ ಎಂದು ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹೂವಿನ ಬೆಳೆಗಾರರಿಗೆ ಸಂಘವು ಸಕಾಲದಲ್ಲಿ ಹೂವಿನ ಗಿಡ ನಾಟಿಕ್ರಮ, ಆರೈಕೆ, ಕಾಯಿಲೆ, ಮದ್ದು, ವ್ಯಾಪಾರ ವ್ಯವಹಾ ರದ ಸಮಗ್ರ ಮಾಹಿತಿಯನ್ನು ಲಭ್ಯ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ನೀಡುತ್ತಿದೆ, ನಮ್ಮ ಸಹಕಾರ ಸಂಘವು ಹೂವಿನ ಬೆಳೆಗಾರರ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಸರಕಾರದಿಂದ ಕಾಲಕಾಲಕ್ಕೆ ಸಿಗುವ ಸವಲತ್ತುಗಳನ್ನು ಬೆಳೆಗಾರರಿಗೆ ದೊರಕಿಸಿ ಕೊಡಲು ಶ್ರಮಿಸುತ್ತಿದೆ. ಸಂಘವು ಎಲ್ಲಾ ವರ್ಗದ ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್ ವ್ಯವಹಾ ರವನ್ನು ನಡೆಸುತ್ತಿದೆ. ಎಲ್ಲರೂ ಸೇರಿ ಸಂಘವನ್ನು ಬೆಳೆಸಿ ಮುನ್ನಡೆಸಬೇಕು ಎಂದು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಮನವಿ ಮಾಡಿದರು.

ಸಂಘವು ಸದಸ್ಯರ ನಡುವೆ ಮಿತವ್ಯಯ ಪರಸ್ಪರ ಸ್ವಸಹಾಯ ಮತ್ತು ಸಹಕಾರದ ಮನೋಭಾವವನ್ನು ಉತ್ತೇಜಿಸಲು ವಿವಿಧ ಯೋಜನೆಯನ್ನು ರೂಪಿಸಲಾಗುತ್ತದೆ. ಎಲ್ಲಾ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಸಂಘದಲ್ಲಿ ಇ ಸ್ಟಾಂಪಿಂಗ್, ಪಾನ್ ಕಾರ್ಡ್,ಮಲ್ಲಿಗೆ ಗಿಡ ಸಹಿತ ವಿವಿಧ ಸೌಲಭ್ಯಗಳು ಕೂಡ ದೊರೆಯುತ್ತಿದೆ ಎಂದು ಫ್ರಾನ್ಸಿಸ್ ಡಿಸೋಜಾ ತಿಳಿಸಿ ದರು. ಸಂಘಕ್ಕೆ ವಿಶೇಷ ಸಹಕಾರ ನೀಡುತ್ತಿರುವ ಅರುಣ್ ಕುಮಾರ್ ಎಸ್ ವಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.

ಹೂವಿನ ಬೆಳೆಗಾರರ ಸಹಕಾರಿ ಸಂಘದ ನಿರ್ದೇಶಕರಾದ ಪ್ಲಾವಿಯಾ ಅರಾನ್ಹ, ಬಿ. ಶಶಿಕಾಂತ್ ಭಟ್, ಜಾನ್ ಟೆಲ್ಲಿಸ್ ಅಜೆಕಾರು, ವೆಂಕಟರಮಣ ಶರ್ಮಾ, ಸುಕುಮಾರ್ ಮುನಿಯಾಲ್ ಉಪಸ್ಥಿತರಿದ್ದರು. ಮಾಜಿ ನಿರ್ದೇಶಕಿ ಪ್ಲೋರಾ ಮೆಂಡೋನ್ಸಾ ಮಾತನಾಡಿ ಸಂಘದ ಅಭಿವೃದ್ಧಿಗೆ ಸರ್ವರ ಸಹಕಾರ ಕೋರಿದರು.

ಸಂಘದ ಕಾರ್ಯದರ್ಶಿ ಲತಾ ವಾರ್ಷಿಕ ವರದಿ ಮಂಡಿಸಿದರು. ಹೆಬ್ರಿಯ ಶಾಖೆಯ ವಿದ್ಯಾಲಕ್ಷ್ಮಿ ಸ್ವಾಗತಿಸಿದರು. ಕಾರ್ಕಳ ಶಾಖೆಯ ಸಂಗೀತ ವಂದಿಸಿದರು. ಹೆಬ್ರಿ ಶಾಖೆಯ ರಕ್ಷಿತಾ ಆಚಾರ್ಯ ಸಹಕರಿಸಿದರು. ಪ್ರಕಾಶ್ ಮಾರ್ಟಿಸ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News