ಗಾಂಧೀಜಿ ಉಡುಪಿ ಭೇಟಿ ಅಸ್ಪಶ್ಯ ನಿವಾರಣಾ ಚಳವಳಿ ಭಾಗವಾಗಿತ್ತು: ಯು.ವಿನೀತ ರಾವ್

Update: 2024-10-04 13:14 GMT

ಉಡುಪಿ: ಈಗ 90 ವರ್ಷದ ಹಿಂದೆ 1934ರ ಫೆಬ್ರವರಿ 25ರಂದು ಮಹಾತ್ಮಾ ಗಾಂಧಿ ಅವರು ಉಡುಪಿಗೆ ಭೇಟಿ ನೀಡಿದ್ದರ ಹಿಂದೆ ಹಲವು ಕಾರಣಗಳು ಇದ್ದವು. ಮುಖ್ಯವಾಗಿ ೧೯೩೩ರ ನವೆಂಬರ್ ೭ರಂದು ಮಹಾರಾಷ್ಟ್ರದ ವಾರ್ಧಾದಲ್ಲಿ ಅವರು ಕೈಗೊಂಡ ಅಸ್ಪೃಶ್ಯತಾ ನಿವಾರಣೆಯ ಯಾತ್ರೆಯ ಭಾಗವಾಗಿಯೇ ಅವರು ಉಡುಪಿಗೂ ಬಂದಿದ್ದರು ಎಂದು ಉಡುಪಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಯು.ವಿನೀತ ರಾವ್ ಹೇಳಿದ್ದಾರೆ.

ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡ ‘ಗಾಂಧೀಜಿ ಉಡುಪಿ ಭೇಟಿಗೆ -೯೦ ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಡುಪಿಯ ಅಜ್ಜರಕಾಡಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತಾಡಿ ಶ್ರೀಕೃಷ್ಣ ಮಠದ ರಥಬೀದಿ ಬಳಿಯಿಂದಲೇ ಅವರು ನಿರ್ಗಮಿಸಿದರು ಕೂಡ ಅವರು ಕೃಷ್ಣನ ದರ್ಶನ ಮಾಡಲಿಲ್ಲ. ದೇಶದ ಎಲ್ಲೆಡೆ ಸರ್ವರಿಗೂ ಪ್ರವೇಶ ಇಲ್ಲದ ದೇವಾಲಯ ಗಳಿಗೆ ತಾನು ಭೇಟಿ ನೀಡುವುದಿಲ್ಲ ಎಂಬ ಅವರ ನಿಲುವಿನ ಕಾರಣದಿಂದ ಅವರು ತಮಿಳುನಾಡಿನ ಜಗತ್ಪ್ರಸಿದ್ಧ ಶ್ರೀರಂಗಮ್ ದೇವಾಲಯಕ್ಕೂ ಹೋಗಿರಲಿಲ್ಲ ಎಂದರು.

೧೯೩೪ರಲ್ಲಿ ಗಾಂಧಿ ಉಡುಪಿಗೆ ಭೇಟಿ ನೀಡಿ ಎರಡು ದಿನ ತಂಗಿದ್ದರು. ಅವರನ್ನು ಉಡುಪಿಗೆ ಕರೆತರುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಈ ಬಗ್ಗೆ ಇಲ್ಲಿಯ ಹಲವು ಗಾಂಧೀವಾದಿ ಹಿರಿಯರು ಕಾರ್ನಾಡ್ ಸದಾಶಿವ ರಾವ್ ನೇತೃತ್ವದಲ್ಲಿ ತುಂಬಾ ಪರಿಶ್ರಮ ಪಟ್ಟಿದ್ದರು. ಅಂದಿನ ಮದ್ರಾಸ್ ಪ್ರೆಸಿಡೆನ್ಸಿ ವ್ಯಾಪ್ತಿಯ ಉಡುಪಿಗೆ ಬರುವುದು ರಾಜಕೀಯ ವಾಗಿ ಬ್ರಿಟಿಷ್ ಸರಕಾರಕ್ಕೆ ಒಂದು ತಲೆನೋವು ಕೂಡ ಆಗಿತ್ತು ಎಂದರು.

೧೯೩೪ರ ಜನವರಿ ೧೪ರಂದೆ ಗಾಂಧಿಯನ್ನು ಉಡುಪಿಗೆ ಕರೆತರುವ ದೊಡ್ಡ ಪ್ರಯತ್ನವೊಂದನ್ನು ಇಲ್ಲಿಯ ಸ್ಥಳೀಯ ಹರಿಜನ ಸೇವಕ ಸಂಘದ ನೇತೃತ್ವದಲ್ಲಿ ಮಾಡಲಾಗಿತ್ತು. ಅದಕ್ಕೆ ಸ್ಥಳೀಯವಾಗಿ ಭಾರೀ ಸಿದ್ಧತೆ ಮತ್ತು ಪ್ರಚಾರ ಕೂಡ ನೀಡಲಾಗಿತ್ತು. ಆದರೆ ಅದು ಕೈಗೂಡಿರಲಿಲ್ಲ ಎಂದರು.

ಹಲವು ಹಿರಿಯರು ಮತ್ತು ವಿವಿಧ ಮೂಲಗಳ ಸಂಶೋಧನೆಯ ಪ್ರಕಾರ ಉಡುಪಿಗೆ ಗಾಂಧಿ ಕರೆತರುವ ಮುಖ್ಯ ಉದ್ದೇಶ ಇಲ್ಲಿಯ ಜನರಿಗೆ ಮಹಾತ್ಮ ದರ್ಶನ ಮಾಡಿಸೋದು. ಆ ಕಾಲದ ಮಹಾದಾನಿ ಉಡುಪಿಯ ಹಾಜಿ ಅಬ್ದುಲ್ಲಾ ಸಾಹೇಬರ ನೇತೃತ್ವದ ಸ್ಥಳೀಯ ಸಮಿತಿಯ ಸುಮಾರು ೨೦೦ ಸ್ವಯಂ ಸೇವಕ ತಂಡದಿಂದ ಗಾಂಧಿ ಬಂದಾಗ ಮಾಡಬೇಕಾದ ಎಲ್ಲ ಸಿದ್ಧತೆಯನ್ನು ಅಷ್ಟು ಅಚ್ಚು ಕಟ್ಟಾಗಿ ನಿರ್ವಹಿಸಲಾಗಿತ್ತು ಎಂದು ವಿನೀತ್ ರಾವ್ ತಿಳಿಸಿದರು.

೧೨೫೪ರೂ. ಸಂಗ್ರಹ: ಗಾಂಧೀಜಿ ಅಪೇಕ್ಷೆ ಮೇರೆಗೆ ಹರಿಜನ ಕಲ್ಯಾಣ ಮತ್ತು ಬಿಹಾರ ಭೂಕಂಪ ನಿಧಿಗೆ ಅಂದು ಉಡುಪಿ ಜನ ನೀಡಿದ ಕೊಡುಗೆಯನ್ನು ಗಾಂಧೀಜಿ ಮುಕ್ತಕಂಠ ದಲ್ಲಿ ಪ್ರಶಂಸೆ ಮಾಡಿದ್ದರು ಆ ಸಭೆಯಲ್ಲಿ ೧೨೫೪ ರೂಪಾಯಿಗಳು ಸಂಗ್ರಹವಾಗಿತ್ತು. ಅದೇ ಸಭೆಯಲ್ಲಿ ಹನ್ನೊಂದು ವರ್ಷದ ನಿರುಪಮಾ ಎಂಬ ಹೆಣ್ಣು ಮಗಳು ಮಹಾತ್ಮರಿಗೆ ತನ್ನ ಬಂಗಾ ರದ ಕೈ ಬಳೆಯನ್ನು ನೀಡಿದ್ದಳು. ಅಂದು ಆದ ಕಾರ್ಯಕ್ರಮದ ಎಲ್ಲ ರೂಪುರೇಷೆ, ಖರ್ಚುವೆಚ್ಚ ಎಲ್ಲವೂ ಗಾಂಧೀಜಿ ಸಂಪಾದಿಸುತ್ತಿದ್ದ ‘ಹರಿಜನ’ ಪತ್ರಿಕೆಯಲ್ಲಿ ಸವಿವರವಾಗಿ ಪ್ರಕಟಗೊಂಡಿತ್ತು ಎಂದರು.

ಮಹಾತ್ಮಾ ಗಾಂಧಿಯವರು ಮಂಗಳೂರು, ಗುರುಪುರ, ಬಜ್ಪೆ, ಕಟೀಲು ಮುಲ್ಕಿ, ಕಾಪು.. ಕಟಪಾಡಿ ಮಾರ್ಗವಾಗಿ ಆಗಮಿಸಿ ಉದ್ಯಾವರ ಹೊಳೆಯನ್ನು ಜಂಗಲ್ ಮೂಲಕ ದಾಟಿ ಉದ್ಯಾವರ ಕಡವಿನ ಬಾಗಿಲು ಮೂಲಕವಾಗಿ ಉಡುಪಿಗೆ ಬಂದರು. ಉಡುಪಿ ಜೋಡುಕಟ್ಟೆಯಲ್ಲಿ ಖಾದಿ ಭಂಡಾರವನ್ನು ಉದ್ಘಾಟಿಸಿದರು. ಸಭೆಯ ನಂತರ ರಥಬೀದಿಗಾಗಿ ಕಲ್ಯಾಣಪುರ, ಕುಂದಾಪುರ ಮೂಲಕ ಉತ್ತರಕನ್ನಡಕ್ಕೆ ಸಾಗಿದರು ಎಂದು ವಿವರಿಸಿದರು.

ರಥಬೀದಿ ಗೆಳೆಯರು ಸಂಘಟನೆ ಅಧ್ಯಕ್ಷ ನಾಗೇಶ್ ಕುಮಾರ್ ಉದ್ಯಾವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಬ್ರಮಣ್ಯ ಜೋಶಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜಿ ಪಿ ಪ್ರಭಾಕರ ತುಮರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News