ಉಡುಪಿ ಜಿಲ್ಲೆ| 3 ವರ್ಷ ಸತತ ಕೊರತೆ ಬಳಿಕ ಅಧಿಕ ಮಳೆ ಕಂಡ 2024ರ ಮಳೆಗಾಲ
ಉಡುಪಿ, ಅ.4: ಸತತ ಮೂರು ವರ್ಷಗಳಿಂದ ಅಂದರೆ 2021ರಿಂದ 2023ರವರೆಗೆ ಮಳೆಗಾಲದ ನಾಲ್ಕು ತಿಂಗಳಲ್ಲಿ (ಜೂ.1ರಿಂದ ಸೆಪ್ಟಂಬರ್ 30ರವರೆಗೆ) ಮಳೆಯ ಕೊರತೆ ಅನುಭವಿಸಿದ್ದ ಉಡುಪಿ ಜಿಲ್ಲೆ 2024ರಲ್ಲಿ ಮೊದಲ ಬಾರಿ ಅಧಿಕ ಮಳೆಯನ್ನು ಪಡೆದಿದೆ.
ಈ ನಾಲ್ಕು ತಿಂಗಳಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ಶೇ.12ರಷ್ಟು ಅಧಿಕ ಮಳೆ ಬಿದ್ದಿರುವುದು ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿಯಂತ್ರಣ ಕೇಂದ್ರದ ಅಂಕಿಅಂಶಗಳಿಂದ ಗೊತ್ತಾಗಿದೆ.
ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ನಾಲ್ಕು ತಿಂಗಳ ಅವಧಿಯ ವಾಡಿಕೆ ಮಳೆ 4022ಮಿ.ಮೀ. ಆಗಿದ್ದು, ಈ ಬಾರಿ 4486 ಮಿಮೀ. ಮಳೆ ಸುರಿಯುವ ಮೂಲಕ ಶೇ.12ರಷ್ಟು ಅಧಿಕ ಮಳೆಯನ್ನು ಜಿಲ್ಲೆ ಕಂಡಿದೆ. ಆದರೆ 2021ರಲ್ಲಿ 3444ಮಿ.ಮೀ. ಮಳೆ ಬೀಳುವ ಮೂಲಕ ಶೇ.14ರಷ್ಟು ಕೊರತೆ, 2022ರಲ್ಲಿ 3998ಮಿ.ಮೀ. ಮಳೆ ಬಿದ್ದು ಶೇ.1ರ ಕೊರತೆ (ವರ್ಷದ ಲೆಕ್ಕದಲ್ಲಿ ಶೇ.5 ಅಧಿಕ) ಹಾಗೂ 2023ರಲ್ಲಿ 3156 ಮಿ.ಮೀ ಮಳೆಯಾಗಿ ಶೇ.22ರಷ್ಟು ಕೊರತೆ ಎದುರಾಗಿತ್ತು.
2023ರಲ್ಲಿ ಇಡೀ ವರ್ಷದಲ್ಲಿ ಅಂದರೆ ಜನವರಿ1ರಿಂದ ಸೆ.30ರವರೆಗೆ ಶೇ.24ರಷ್ಟು ಮಳೆಯ ಕೊರತೆ ಕಾಣಿಸಿಕೊಂಡಿದ್ದು, ರಾಜ್ಯದ 195 ಬರಪೀಡಿತ ತಾಲೂಕುಗಳಲ್ಲಿ ಉಡುಪಿಯ ಹೆಬ್ರಿ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕುಗಳೂ ಮೊದಲ ಬಾರಿ ಸ್ಥಾನ ಪಡೆದು ಬರಪೀಡಿತ ತಾಲೂಕು ಎಂದು ಘೋಷಿಸಿಕೊಂಡಿದ್ದವು.
ಆದರೆ ಈ ಬಾರಿ ಅಧಿಕ ಮಳೆ ಸುರಿಯುವ ಸೂಚನೆಗಳನ್ನು ಹವಾಮಾನ ಕೇಂದ್ರಗಳು ಮುಂಗಾರು ಪೂರ್ವದಲ್ಲೇ ನೀಡಿ ದ್ದವು. ಜೂನ್ ತಿಂಗಳ ನಿಧಾನಗತಿಯ ಆರಂಭದ ಬಳಿಕ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಚೆನ್ನಾಗಿ ಬಂದು ಇದೀಗ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಅಧಿಕ ಮಳೆ ಬಿದ್ದಿದೆ.
ಆದರೆ ಇದರ ನಡುವೆಯೂ ಹೆಬ್ರಿ ತಾಲೂಕಿನಲ್ಲಿ ಈ ಸಲವೂ ಮಳೆಯಲ್ಲಿ ಕೊರತೆ ಕಂಡುಬಂದಿದೆ. ಹೆಬ್ರಿ ತಾಲೂಕಿನಲ್ಲಿ ಮಳೆಗಾಲದ ನಾಲ್ಕು ತಿಂಗಳ ವಾಡಿಕೆ ಮಳೆ 5268ಮಿ.ಮೀ. ಆಗಿದ್ದರೆ ಈ ಬಾರಿ ಬಿದ್ದಿರುವುದು 4954 ಮಿ.ಮೀ. ಮಾತ್ರ. ಈ ಮೂಲಕ ಶೇ.6ರಷ್ಟು ಕೊರತೆ ಕಂಡುಬಂದಿದೆ. ಇಡೀ ವರ್ಷವನ್ನು ಗಣನೆಗೆ ತೆಗೆದುಕೊಂಡರೆ 5536ಮಿ.ಮೀ. ವಾಡಿಕೆ ಮಳೆಯಲ್ಲಿ ಈ ಬಾರಿ ಬಿದ್ದಿರುವುದು 5366ಮಿ.ಮೀ. ಮಳೆ ಮಾತ್ರ ಈ ಮೂಲಕವೂ ಶೇ.3ರಷ್ಟು ಕೊರತೆ ಕಂಡುಬಂದಿದೆ ಎಂದು ಅಂಕಿಅಂಶಗಳು ಹೇಳುತ್ತವೆ.
ಜಿಲ್ಲೆಯ ಏಳು ತಾಲೂಕುಗಳಿಗೆ ಹೋಲಿಸಿ ನೋಡಿದರೆ ಈ ಬಾರಿ ಕುಂದಾಪುರ ತಾಲೂಕಿನಲ್ಲಿ ಅತ್ಯಧಿಕ ಮಳೆಯಾಗಿದೆ. ಮಳೆಗಾಲದ ನಾಲ್ಕು ತಿಂಗಳಲ್ಲಿ ಇಲ್ಲಿ ಶೇ.45ರಷ್ಟು ಅಧಿಕ ಮಳೆಯಾಗಿದ್ದರೆ, ಜನವರಿ ತಿಂಗಳಿನಿಂದ ಸೆಪ್ಟಂಬರ್‌ವರೆಗೆ ಅಂಕಿಅಂಶವನ್ನು ನೋಡಿದಾಗ ಶೇ.42ರಷ್ಟು ಅಧಿಕ ಮಳೆ ಸುರಿದಿದೆ. ಒಟ್ಟಾರೆಯಾಗಿ ಇಲ್ಲಿ 3601ಮಿ.ಮೀ. ವಾಡಿಕೆ ಮಳೆಯಾಗಿದ್ದರೆ, ಈ ಬಾರಿ ಬಿದ್ದಿರುವುದು 5129 ಮಿ.ಮೀ. ಆಗಿದೆ.
ಉಳಿದಂತೆ ಮಳೆಗಾಲದ ನಾಲ್ಕು ತಿಂಗಳಲ್ಲಿ ಕಾರ್ಕಳದಲ್ಲಿ +6, ಉಡುಪಿಯಲ್ಲಿ +12, ಬೈಂದೂರಿನಲ್ಲಿ +19, ಬ್ರಹ್ಮಾವರ ದಲ್ಲಿ +17, ಕಾಪುವಿನಲ್ಲಿ +11ರಷ್ಟು ಅಧಿಕ ಮಳೆ ಬಿದ್ದಿದೆ. ಇನ್ನು ವರ್ಷದ 9 ತಿಂಗಳಲ್ಲಿ ಕಾರ್ಕಳದಲ್ಲಿ +8, ಉಡುಪಿಯಲ್ಲಿ +14, ಬೈಂದೂರಿನಲ್ಲಿ +16, ಬ್ರಹ್ಮಾವರದಲ್ಲಿ +18, ಕಾಪುವಿನಲ್ಲಿ +16ರಷ್ಟು ಅಧಿಕ ಮಳೆಯಾಗಿದೆ.
ಹೀಗಾಗಿ ಸತತ ಮೂರು ವರ್ಷಗಳ ಮಳೆ ಹಿನ್ನಡೆಯ ಬಳಿಕ ಈ ವರ್ಷ ಅಧಿಕ ಮಳೆ ಸುರಿದಿರುವುದು ಕುಡಿಯುವ ನೀರು ಹಾಗೂ ನೀರಿನ ಇತರ ಬಳಕೆಗೆ ಹೆಚ್ಚು ಅನುಕೂಲಕರವಾಗಿದೆ. ಅಕ್ಟೋಬರ್ ತಿಂಗಳಲ್ಲೂ ಮಳೆ ಮುಂದುವರಿದಿರುವುದು ಹಾಗೂ ಹಿಂಗಾರು ಸೀಝನ್‌ನಲ್ಲೂ ಮಳೆಯ ಸಾದ್ಯತೆಯ ಹಿನ್ನೆಲೆಯಲ್ಲಿ ಮುಂದಿನ ಬೇಸಿಗೆಗೆ ಆಶಾದಾಯಕ ಬೆಳವಣಿಗೆ ಯಾಗಿದೆ.
*ಜಿಲ್ಲೆಯಲ್ಲಿ ಜನವರಿಯಿಂದ ಸೆಪ್ಟಂಬರ್‌ವರೆಗೆ ಬಿದ್ದ ಮಳೆ ವಿವರ
ತಾಲೂಕು ವಾಡಿಕೆ ಮಳೆ ಬಿದ್ದ ಮಳೆ ಕೊರತೆ
ಕಾರ್ಕಳ 4376ಮಿ.ಮೀ. 4739ಮಿ.ಮೀ +08
ಕುಂದಾಪುರ 3601ಮಿ.ಮೀ. 5129ಮಿ.ಮೀ. +42
ಉಡುಪಿ 3629ಮಿ.ಮೀ. 4133ಮಿ.ಮೀ. +14
ಬೈಂದೂರು 4208ಮಿ.ಮೀ. 4891ಮಿ.ಮೀ. +16
ಬ್ರಹ್ಮಾವರ 3787ಮಿ.ಮೀ. 4462ಮಿ.ಮೀ. +18
ಕಾಪು 3495ಮಿ.ಮೀ. 4037ಮಿ.ಮೀ. +16
ಹೆಬ್ರಿ 5536ಮಿ.ಮೀ. 5366ಮಿ.ಮೀ. -03
ಜಿಲ್ಲೆ ಸರಾಸರಿ 4273ಮಿ.ಮೀ. 4813ಮಿ.ಮೀ. +13
*ಮಳೆಗಾಲದ ನಾಲ್ಕು ತಿಂಗಳಲ್ಲಿ (ಜೂ.-ಸೆ.)ಬಿದ್ದ ಮಳೆ ವಿವರ
ತಾಲೂಕು ವಾಡಿಕೆ ಮಳೆ ಬಿದ್ದ ಮಳೆ ಕೊರತೆ
ಕಾರ್ಕಳ 4117ಮಿ.ಮೀ. 4351ಮಿ.ಮೀ +06
ಕುಂದಾಪುರ 3335ಮಿ.ಮೀ. 4863ಮಿ.ಮೀ. +45
ಉಡುಪಿ 3367ಮಿ.ಮೀ. 3773ಮಿ.ಮೀ. +12
ಬೈಂದೂರು 3941ಮಿ.ಮೀ. 4696ಮಿ.ಮೀ. +19
ಬ್ರಹ್ಮಾವರ 3527ಮಿ.ಮೀ. 4129ಮಿ.ಮೀ. +17
ಕಾಪು 3216ಮಿ.ಮೀ. 3562ಮಿ.ಮೀ. +11
ಹೆಬ್ರಿ 5268ಮಿ.ಮೀ. 4954ಮಿ.ಮೀ. -06
ಜಿಲ್ಲೆ ಸರಾಸರಿ 4022ಮಿ.ಮೀ. 4486ಮಿ.ಮೀ. +12