ಎಂಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

Update: 2024-10-08 15:38 GMT

ಉಡುಪಿ, ಅ.8: ಎಂಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚಿಸಿರುವ ಎರಡು ಪ್ರತ್ಯೇಕ ಘಟನೆಗಳು ಉಡುಪಿ ಹಾಗೂ ಕೋಟದಲ್ಲಿ ನಡೆದಿದೆ.

ಕೆಳಾರ್ಕಳಬೆಟ್ಟು ಗ್ರಾಮದ ಜಗದೀಶ ರಾವ್(69) ಎಂಬವರು ಅ.6ರಂದು ಸಂತೆಕಟ್ಟೆಯಲ್ಲಿರುವ ಎಟಿಎಂನಿಂದ ಹಣವನ್ನು ತೆಗೆದಿದ್ದು ನಂತರ ಹಿಂದಿದ್ದ ಓರ್ವ ವ್ಯಕ್ತಿಯು ಸಹಾಯ ಮಾಡುವಂತೆ ನಟಿಸಿ ಜಗದೀಶ್ ರಾವ್ ಅವರ ಎಟಿಎಂ ಕಾರ್ಡನ್ನು ತೆಗೆದುಕೊಟ್ಟಿದ್ದನು. ಈ ಮಧ್ಯೆ ಆತ ಜಗದೀಶ್ ರಾವ್ ಅವರ ಗಮನಕ್ಕೆ ಬಾರದೇ ಎಟಿಎಂ ಕಾರ್ಡನ್ನು ಬದಲಾಯಿಸಿದ್ದನು. ಬಳಿಕ ಇವರ ಖಾತೆಯಿಂದ ಒಟ್ಟು 2,40,000ರೂ. ಹಣವನ್ನು ತೆಗೆದು ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಕೋಡಿ ಗ್ರಾಮದ ಚೆನ್ನಪ್ಪ(73) ಎಂಬವರು ಅ.4ರಂದು ಪಾಂಡೇಶ್ವರ ಗ್ರಾಮದ ಸಾಸ್ತಾನದಲ್ಲಿರುವ ಎಟಿಎಮ್‌ನಲ್ಲಿ ಹಣ ತೆಗೆಯಲು ಒಳಗೆ ಹೋಗಿದ್ದು, ಈ ವೇಳೆ ಒಬ್ಬ ಅಪರಿಚಿತ ವ್ಯಕ್ತಿ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡನ್ನು ಬದಲಾಯಿಸಿದ್ದನು. ಬಳಿಕ ಆತ ಅ.4ರಿಂದ ಅ.7ರವರೆಗೆ ಸಾಲಿಗ್ರಾಮ, ಶಿವಮೊಗ್ಗ, ಕಾರ್ಗಲ್ ಹಾಗೂ ಗೋಕರ್ಣ ಕಡೆಗಳಲ್ಲಿ ಒಟ್ಟು 99,000ರೂ. ಹಣ ಚೆನ್ನಪ್ಪ ಖಾತೆಯಿಂದ ಡ್ರಾ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News