ಪಂಚಾಯತ್ ರಾಜ್ ಇಲಾಖೆಯ ಆಡಳಿತ ಸ್ಥಗಿತ: ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ಕೋಟ ಒತ್ತಾಯ

Update: 2024-10-08 16:10 GMT

ಉಡುಪಿ: ಕರ್ನಾಟಕ ರಾಜ್ಯದ ಸರಿ ಸುಮಾರು ೬,೦೦೦ದಷ್ಟು ಗ್ರಾಮ ಪಂಚಾಯತಿಗಳು ಆಡಳಿತ ವ್ಯವಸ್ಥೆ ಸಿಬ್ಬಂದಿಗಳ ಮುಷ್ಕರದಿಂದಾಗಿ ಸ್ಥಗಿತಆಗಿದೆ. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶಿಸಿ, ಗ್ರಾಮೀಣಾಭಿವೃದ್ಧಿ ಸಚಿವರು ಮತ್ತು ಸಿಬ್ಬಂದಿ ಗಳ ಸಂಘಟನೆಯ ಮುಖಂಡರನ್ನು ಕರೆದು ಸಮಸ್ಯೆ ಬಗೆಹರಿಸಬೇಕೆಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಲೆಕ್ಕ ಸಹಾಯಕರು, ನೀರು ಸರಬರಾಜು ಸಿಬ್ಬಂದಿಗಳು, ಸ್ವಚ್ಛತಾ ಕಾರ್ಯಕರ್ತರ ಸಹಿತ ಇಡೀ ಪಂಚಾಯತಿಯ ಕಾರ್ಯಾಂಗ ಕೆಲಸವನ್ನು ಸ್ಥಗಿತ ಗೊಳಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪ್ರತಿಭ ಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಪಂಚಾಯತ್‌ನ ಸಣ್ಣಪುಟ್ಟ ಕೆಲಸವು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗ್ರಾಪಂಗಳ ಸಾಮಾನ್ಯ ಸಭೆಗಳು ನಡೆಯದೆ ಸ್ಥಳೀಯಾಡಳಿತದಿಂದ ಸಿಗಬೇಕಾದ ಪರವಾನಿಗೆಗಳು, ನೀರು ಸರಬ ರಾಜು, ತೆರಿಗೆ ಸಂಗ್ರಹ ವ್ಯವಸ್ಥೆಗಳಿಂದ ಜನಸಾಮಾನ್ಯರು ವಂಚಿತರಾಗುತ್ತಿದ್ದಾರೆ. ಇಷ್ಟೆಲ್ಲಾ ನಡೆದು ವಾರಗಟ್ಟಲೆ ಪಂಚಾಯತ್ ರಾಜ್ ಆಡಳಿತ ಸ್ಥಗಿತವಾಗಿದ್ದರೂ ಸರ್ಕಾರ ಮೌನ ವಹಿಸುವುದು ಸರಿಯಲ್ಲ ಎಂದವರು ಹೇಳಿದ್ದಾರೆ.

ಪಂಚಾಯತ್ ಸಿಬ್ಬಂದಿಗಳು ಸರಳವಾದ ಬೇಡಿಕೆಯನ್ನು ಮುಂದಿಟ್ಟಿದ್ದು, ಕೆಡಿಪಿ ಸಭೆ ನಡೆಸಲು ತಮಗಿರುವ ಸಮಸ್ಯೆ ಯನ್ನು ವಿವರಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬಿ- ದರ್ಜೆ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ದ್ದಾರೆ. ಈಗಾಗಲೇ ಕಡತ ಒಂದು ಹಂತದಲ್ಲಿ ವಿಲೇವಾರಿ ಆಗಬೇಕಾಗಿದೆ. ಆರೇಳು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲಾಮಟ್ಟದಲ್ಲಿ ಕೌನ್ಸಿಲ್ ಮೂಲಕ ವರ್ಗಾಯಿಸಬೇಕೆಂಬ ಅವರ ಬೇಡಿಕೆ ಅರ್ಥಪೂರ್ಣವಾಗಿದೆ.

ಅದೇ ರೀತಿ ಜೇಷ್ಠತೆ ಪಟ್ಟಿಯನ್ನು ವಿಳಂಬವಿಲ್ಲದೆ ಅಂತಿಮಗೊಳಿಸಿ, ಭಡ್ತಿ ಕ್ರಮ ಕೈಗೊಳ್ಳಬೇಕೆಂಬ ಸಿಬ್ಬಂದಿಗಳ ಆಗ್ರಹ ಪರಿಗಣಿಸುವಂತಹದ್ದು. ಉದ್ಯೋಗ ಖಾತ್ರಿ ಯೋಜನೆ ಮತ್ತು ವೃಂದ ನೇಮಕಾತಿ ನಿಯಮಗಳನ್ನು ರಚಿಸಲು ಸರ್ಕಾರಕ್ಕೆ ಸಾಧ್ಯವಾಗಲಿದೆ. ಕರ ವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್‌ಗಳು, ನೀರುಗಂಟಿ ಜವಾನ ಮತ್ತು ಸ್ವಚ್ಛತೆಗಾರರ ವೇತನ ಪರಿಷ್ಕರಣಿಯನ್ನು ಸರಕಾರ ಮಾನವೀಯ ನೆಲೆಯಲ್ಲಿ ಮಾಡಬಹುದಾಗಿದೆ. ಈ ಸರಳವಾದ ಬೇಡಿಕೆಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡರೆ ಪಂಚಾಯತ್ ನೌಕರರ ಸತ್ಯಾಗ್ರಹ ಮುಗಿಯುವ ಸಾಧ್ಯತೆ ಇದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಧರಣಿ ಹೀಗೆ ಮುಂದುವರಿದರೆ ಪಂಚಾಯತ್‌ರಾಜ್ ಆಡಳಿತ ಸ್ಥಗಿತ ಗೊಳ್ಳುವ ಸಂಭವವಿದ್ದು, ಕರ್ನಾಟಕ ಮುಖ್ಯಮಂತ್ರಿಗಳಾದ ನೀವು ಪಂಚಾಯತ್ ರಾಜ್ ಸಚಿವರೊಡನೆ ಮಧ್ಯಪ್ರವೇಶಿಸಿ ವಿಧಾನಸೌಧದಲ್ಲಿ ತುರ್ತು ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News