ಸುವರ್ಣ ಸಂಭ್ರಮ ಪ್ರಶಸ್ತಿ ವಿಜೇತ ಪೇತ್ರಿ ಮಂಜುನಾಥ ಪ್ರಭುಗೆ ಸನ್ಮಾನ
ಉಡುಪಿ: 2024ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರಕಾರ ನೀಡಿದ ಸುವರ್ಣ ಸಂಭ್ರಮ ಪ್ರಶಸ್ತಿಯನ್ನು ಪಡೆದ ಯಕ್ಷಗಾನ ಕಲಾವಿದ ಪೇತ್ರಿ ಮಂಜುನಾಥ ಪ್ರಭುರನ್ನು ಅವರು ಹಿಂದೆ ಗುರುವಾಗಿ ಸೇವೆ ಸಲ್ಲಿಸಿದ್ದ ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಯಕ್ಷರಂಗದ ಸದಸ್ಯರು ಹಾಗೂ ಗುರುಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಮಂಜುನಾಥ ಪ್ರಭು, ಡಾ.ಶಿವರಾಮ ಕಾರಂತರ ಆದೇಶದಂತೆ ತಾನು ಯಕ್ಷಗಾನ ಮೇಳವನ್ನು ಬಿಟ್ಟು ಕೇಂದ್ರದ ಗುರುವಾಗಿ ಬಂದ ಕ್ಷಣಗಳನ್ನು ಸ್ಮರಿಸಿಕೊಂಡು ಪರಂಪರೆಯ ಯಕ್ಷಗಾನ ಕಲೆಯನ್ನು ಉಳಿಸಿಕೊಂಡು ಹೋಗಬೇಕಾದ ಅಗತ್ಯತೆಯನ್ನು ವಿವರಿಸಿದರು.
ಯಕ್ಷಗಾನ ಕೇಂದ್ರದ ಸಲಹಾಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಅವರು ಮಂಜುನಾಥ ಪ್ರಭುಗಳಿಗೆ ಯಕ್ಷಗಾನ ಕ್ಷೇತ್ರದಲ್ಲಿ ಇರುವ ಜ್ಞಾನ, ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು. ಅವರ ಜ್ಞಾನವನ್ನು ಮುಂದಿನ ದಿನಗಳಲ್ಲಿ ಯಕ್ಷಗಾನ ಕೇಂದ್ರದ ಚಟುವಟಿಕೆಗಳಿಗೆ ಉಪಯೋಗಿಸಿ ಕೊಳ್ಳಲಾಗುವುದು ಎಂದರು.
ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಭುವನಪ್ರಸಾದ್ ಹೆಗ್ಡೆ ವಂದಿಸಿದರು. ಸಲಹಾ ಸಮಿತಿಯ ಸದಸ್ಯರಾದ ವಿಶ್ವನಾಥ ಶೆಣೈ, ಕೇಂದ್ರದ ಗುರುಗಳು ಹಾಗೂ ಯಕ್ಷರಂಗದ ಸದಸ್ಯರು ಹಾಜರಿದ್ದರು.