ಶಾಲಾ ಕಾಲೇಜುಗಳಲ್ಲಿ ರಂಗಶಿಕ್ಷಣ ಇಂದಿನ ಅಗತ್ಯ: ಡಾ.ಬಲ್ಲಾಳ್
ಉಡುಪಿ: ನಾಡಿನ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ 60ರ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ರಂಗಭೂಮಿ ಉಡುಪಿ ಸಂಸ್ಥೆ ಇದೀಗ ಶಾಲಾ ಕಾಲೇಜುಗಳ ಮಕ್ಕಳಿಗೆ ರಂಗಶಿಕ್ಷಣ ನೀಡುವ ಮಹಾತ್ಕಾರ್ಯಕ್ಕೆ ಮುಂದಾಗಿರುವುದು ಅತ್ಯಂತ ಪ್ರಶಂಸನೀಯ ಎಂದು ಮಾಹೆ ಸಹಕುಲಾಧಿಪತಿ ಹಾಗೂ ರಂಗಭೂಮಿ ಉಡುಪಿಯ ಗೌರವಾಧ್ಯಕ್ಷ ಆಗಿರುವ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.
ಕುಂಜಿಬೆಟ್ಟಿನ ಶಾರದಾ ರೆಸಿಡೆನ್ಶಿಯಲ್ ಸ್ಕೂಲಿನ ಗೀತಾಂಜಲಿ ಸಭಾಂಗಣ ದಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯ 60ರ ಸಂಭ್ರಮಾಚರಣೆಯನ್ನು ಉದ್ಘಾಟಿಸಿ, ರಂಗಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಶಾಲಾ ಕಾಲೇಜುಗಳಲ್ಲಿ ರಂಗಶಿಕ್ಷಣವನ್ನು ಮಕ್ಕಳಿಗೆ ನೀಡಿ ಅವರಲ್ಲಿ ನಾಟಕಗಳತ್ತ ಆಸಕ್ತಿ ಮೂಡಿಸಿದರೆ ಭವಿಷ್ಯದಲ್ಲಿ ರಂಗಭೂಮಿಗೆ ಉತ್ತಮ ಭವಿಷ್ಯವಿದೆ. ಇದು ಇಂದಿನ ಅಗತ್ಯವೂ ಹೌದು, ಈ ನಿಟ್ಟಿನಲ್ಲಿ ರಂಗಭೂಮಿ ಯ ಕಾರ್ಯ ಸ್ತುತ್ಯಾರ್ಹ ಎಂದವರು ಪ್ರಶಂಸಿದರು.
ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ೬೦ ವರ್ಷ ಎಂಬುದು ಮಾನವರಿಗೆ ವೃದ್ಧಾಪ್ಯ ಎನ್ನುವುದಾದರೆ, ಸಂಘಸಂಸ್ಥೆಗಳಿಗೆ ಅದು ಯೌವ್ವನಾವಸ್ಥೆಯಾಗಿದೆ. ಉಡುಪಿಯಲ್ಲಿ ಖ್ಯಾತಿ ಪಡೆದ ಯಕ್ಷ ಶಿಕ್ಷಣದಂತೆ ಮಕ್ಕಳಿಗೂ ಶಾಲಾ ಕಾಲೇಜು ಹಂತದಲ್ಲಿ ರಂಗ ಶಿಕ್ಷಣ ನೀಡಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದ ರಂಗಶಿಕ್ಷಣ ಹಾಗೂ ರಂಗಭಾಷೆ ಎಂಬ ಯೋಜನೆಗಳನ್ನು ರಂಗಭೂಮಿ ಹಮ್ಮಿಕೊಂಡಿದೆ ಎಂದರು.
ಕಲೆ ಎಂಬುದು ವಂಶಪಾರಂಪರ್ಯವಾಗದೆ, ಆಸಕ್ತರಿಗೂ ರಂಗಶಿಕ್ಷಣ ಪಡೆಯಬೇಕೆಂಬ ಹಂಬಲವಿದ್ದಲ್ಲಿ ರಂಗಭೂಮಿ ಅವರಿಗೆ ವೇದಿಕೆಯಾಗಲಿದೆ. ಪ್ರಸ್ತುತ ಉಡುಪಿಯ 13 ಶಿಕ್ಷಣ ಸಂಸ್ಥೆಗಳಲ್ಲಿ ರಂಗಶಿಕ್ಷಣವನ್ನು ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಡಾ.ತಲ್ಲೂರು ತಿಳಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ರಂಗಶಿಕ್ಷಣ ಅಭಿಯಾನದಲ್ಲಿ ಪಾಲ್ಗೊಳ್ಳುವ ಪ್ರೌಢಶಾಲೆಗಳ ಮುಖ್ಯೋಪಾಧ್ಯಯರಿಗೆ, ರಂಗ ನಿರ್ದೇಶಕ ರಿಗೆ, ರಂಗಭಾಷೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಕಾಲೇಜು ಪ್ರಾಂಶುಪಾಲರಿಗೆ ಗೌರವಾರ್ಪಣೆ ನಡೆಯಿತು.
ರಂಗಭೂಮಿ ಉಡುಪಿ ಹಮ್ಮಿಕೊಂಡ ‘ರಂಗ ಶಿಕ್ಷಣ’ದ ಸಂಚಾಲಕ ವಿದ್ಯಾವಂತ ಆಚಾರ್ಯ ಯೋಜನೆಯ ಕುರಿತು ವಿವರಿಸಿದರು. ಮಕ್ಕಳಲ್ಲಿ ವಿಭಿನ್ನ ಕೌಶಲಗಳನ್ನು ಬೆಳೆಸುವ ಉದ್ದೇಶ ರಂಗಶಿಕ್ಷಣ ಸಾಕಾರಗೊಳ್ಳಲಿದೆ. ಮುಂದೆ ಇನ್ನಷ್ಟು ಶಾಲೆಗಳಿಗೆ ಯೋಜನೆಯನ್ನು ವಿಸ್ತರಿಸುವ ಚಿಂತನೆಯಿದೆ ಎಂದರು.
‘ರಂಗಭಾಷೆ’ ಕಾರ್ಯಕ್ರಮದ ಎಚ್.ಜಯಪ್ರಕಾಶ್ ಕೆದ್ಲಾಯ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗಭೂಮಿ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಂಗಭೂಮಿ ರಸಗ್ರಹಣ ಶಿಬಿರವನ್ನು ಆಯೋಜಿಸಲಾಗಿದೆ. ಈ ಕಾರ್ಯದಲ್ಲಿ ಯಕ್ಷ ರಂಗಾಯಣ ಕಾರ್ಕಳ ಕೈ ಜೋಡಿಸಲಿದೆ. ಈ ಸಂಸ್ಥೆಯ ನಿರ್ದೇಶಕ ವೆಂಕಟರಮಣ ಐತಾಳ್, ಪ್ರಸಿದ್ಧ ರಂಗ ಕರ್ಮಿಗಳಾದ ಪ್ರಸನ್ನ, ಅಕ್ಷರ, ನಾಗಾಭರಣ, ಮಂಡ್ಯ ರಮೇಶ್, ಸಿಹಿಕಹಿ ಚಂದ್ರು, ಕೆ.ಜೆ.ಕೃಷ್ಣಮೂರ್ತಿ, ಶ್ವೇತಾ ಎಚ್.ಕೆ. ಮೊದಲಾದ ಸಂಪನ್ಮೂಲ ವ್ಯಕ್ತಿಗಳಾಗಿ ಕೈ ಜೋಡಿಸಲಿದ್ದಾರೆ. ಈ ನಿಟ್ಟಿನಲ್ಲಿ ನ.16ರಿಂದ 18 ರವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ 3 ದಿನಗಳ ವಸತಿ ಸಹಿತ ಶಿಬಿರ ನಡೆಯಲಿದೆ.
ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ಎಸ್.ರಾಜಗೋಪಾಲ ಬಲ್ಲಾಳ್, ಸಹ ಸಂಚಾಲಕ ಡಾ.ವಿಷ್ಣುಮೂರ್ತಿ ಪ್ರಭು, ಸಹ ಸಂಚಾಲಕ ರವಿರಾಜ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.