ಮಕ್ಕಳ ಸುಪ್ತ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ

Update: 2024-11-07 13:57 GMT

ಉಡುಪಿ, ನ.7: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸು ವುದರೊಂದಿಗೆ ಅದರ ಅನಾವರಣಕ್ಕೆ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕಾಗು ತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಗುರುವಾರ ನಗರದ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ ಹಾಗೂ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಕೃತಿಯ ಅಸಮತೋಲನಕ್ಕೆ ಮುಖ್ಯ ಕಾರಣ ಮನುಷ್ಯ. ಆತನ ಅಭಿವೃದ್ಧಿಯ ವೇಗದಿಂದಾಗಿ ಪ್ರಕೃತಿ ನಲುಗಿ ಹೋಗುತ್ತಿದೆ. ಪರಿಸರ ಸ್ವಚ್ಛವಾಗಿ ಡುವುದು ಪ್ರತಿಯೊಬ್ಬ ನಾಗರಿಕರರ ಜವಾಬ್ದಾರಿಯಾಗಿದ್ದು, ಪರಿಸರ ಉಳಿಸುವುದ ರೊಂದಿಗೆ ಸಕಲ ಜೀವಿಗಳ ಉಳಿವಿಗೆ ಕಾರಣರಾಗುವಂತೆ ಕಿವಿಮಾತು ಹೇಳಿದ ಜಿಲ್ಲಾಧಿಕಾರಿ, ಮಕ್ಕಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಮಾತನಾಡಿ, ಮಕ್ಕಳಲ್ಲಿ ಅವರದ್ದೇ ಆದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೇರೇಪಿಸುವ ಕೆಲಸವನ್ನು ಪೋಷಕರು ಮಾಡಬೇಕು. ಪ್ರಕೃತಿಯ ಮಹತ್ವ, ಅಗತ್ಯತೆಯ ಕುರಿತು ಮಕ್ಕಳಿಗೆ ತಿಳಿಸಿ ಹೇಳಬೇಕು. ಇದರಿಂದ ಪರಿಸರವನ್ನು ಉಳಿಸಿ-ಬೆಳೆಸುವಲ್ಲಿ ಅವರು ತೊಡಗಿಸಿಕೊಳ್ಳುತ್ತಾರೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ. ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮಕ್ಕಳ ಕೊಡುಗೆ ಅಪಾರ. ಹೊಸ ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಲು ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಬೇಕು. ಅವರ ಅಭಿರುಚಿಗಳನ್ನು ಪುರಸ್ಕರಿಸಿ, ಪ್ರೋತ್ಸಾಸುವ ಕೆಲಸವನ್ನು ಪೋಷಕರು, ಹಿರಿಯರು ಮಾಡಬೇಕು ಎಂದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿ ಕಾರಿ ಅನುರಾಧ ಹಾದಿಮನೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ ನಾಯಕ್, ಮಕ್ಕಳ ವಾರ್ಡ್ ಕ್ಲಬ್‌ನ ಅಧ್ಯಕ್ಷೆ ಸುಮನಾ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಸ್ವಾಗತಿಸಿ, ದೀಪಾ ನಿರೂಪಿಸಿದರೆ, ಶ್ವೇತಾ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ ಹಾಗೂ ವಾದ್ಯ ಸಂಗೀತ ಸ್ಪರ್ಧೆಗಳು ನಡೆದವು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News