ಒಡಂಬಡಿಕೆ ಅವಧಿ ಮುಗಿದ ಕೃಷಿ ಯಂತ್ರಧಾರೆ ಕೇಂದ್ರಗಳ ನಿರ್ವಹಣೆಗೆ ಆಸಕ್ತರಿಂದ ಅರ್ಜಿ ಆಹ್ವಾನ

Update: 2024-11-07 14:10 GMT

ಉಡುಪಿ, ನ.7: ಜಿಲ್ಲೆಯಲ್ಲಿ 6 ವರ್ಷಗಳ ಒಡಂಬಡಿಕೆ ಅವಧಿ ಮುಗಿದ ವಿಎಸ್‌ಟಿ ಟಿಲ್ಲರ್ಸ್‌ ಮತ್ತು ಟ್ಯಾಕ್ಟರ್ಸ್‌ ಬೆಂಗಳೂರು ಸಂಸ್ಥೆಯ ವತಿಯಿಂದ ಸ್ಥಾಪಿಸಲಾದ 4 ಹೋಬಳಿ ಮಟ್ಟದ ಕೃಷಿ ಯಂತ್ರಧಾರೆ ಕೇಂದ್ರಗಳಾದ ಕೋಟ, ಕಾಪು, ಕುಂದಾಪುರ ಹಾಗೂ ಕಾರ್ಕಳ ಕೇಂದ್ರಗಳನ್ನು ಆಸಕ್ತಿಯುಳ್ಳ ರೈತ ಉತ್ಪಾದಕ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳಿಗೆ ಹಸ್ತಾಂತರಿಸಲಾಗುತ್ತಿದೆ.

ಇದಕ್ಕಾಗಿ ಆಸಕ್ತ ರೈತ ಉತ್ಪಾದಕ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳು ಕಚೇರಿ ವೇಳೆಗಳಲ್ಲಿ ಕೇಂದ್ರಗಳಲ್ಲಿ ಲಭ್ಯವಿರುವ ಯಂತ್ರೋಪಕರಣಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಕೇಂದ್ರಗಳ ನಿರ್ವಹಣೆಗೆ ಆಸಕ್ತಿ ಇದ್ದಲ್ಲಿ ಅರ್ಜಿಗಳನ್ನು ನವೆಂಬರ್ 9ರೊಳಗೆ ಕೃಷಿ ಇಲಾಖೆಯ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಿಲ್ಲಾ ಮಟ್ಟದ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.

ಪ್ರತಿ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ರೈತ ಉತ್ಪಾದಕ ಸಂಸ್ಥೆಗಳು 50,000 ರೂ. ಹಾಗೂ ಇತರೆ ಸಂಸ್ಥೆಗಳು 1 ಲಕ್ಷ ರೂ. ಇ.ಎಂ.ಡಿ ಬಾಬ್ತನ್ನು ಜಂಟಿ ಕೃಷಿ ನಿರ್ದೇಶಕರು, ಉಡುಪಿ ಇವರ ಹೆಸರಿನಲ್ಲಿ 9 ವರ್ಷಗಳ ಅವಧಿಗೆ ಬ್ಯಾಂಕ್ ಗ್ಯಾರಂಟಿ ಯನ್ನು ನೀಡಬೇಕು. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ವೀಕರಿಸಿದ ಸಂಸ್ಥೆಗಳು ಜಂಟಿ ಕೃಷಿ ನಿರ್ದೇಶಕರೊಂದಿಗೆ 9 ವರ್ಷಗಳ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕು.

ಈ ಕುರಿತ ಹೆಚ್ಚಿನ ಮಾಹಿತಿ ಹಾಗೂ ಟೆಂಡರ್ ಷರತ್ತುಗಳಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News