ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸಕಾರ್ಯ ವಿಳಂಬ: ಸಾರ್ವಜನಿಕರ ಆಕ್ರೋಶ

Update: 2024-11-14 13:35 GMT

ಉಡುಪಿ: ಕೆಲವೊಂದು ಕಾನೂನು ತೊಡಕು ಹಾಗೂ ಅಧಿಕಾರಿಗಳ ಕೊರತೆಯಿಂದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಕೆಲಸ ಕಾರ್ಯಗಳು ವಿಳಂಬ ಆಗುತ್ತಿರುವ ಬಗ್ಗೆ ಸಾರ್ವಜನಿಕರು ಇಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯುಕ್ತರು, ನಗರ ಯೋಜಕ ಸದಸ್ಯರು, ನಗರ ಯೋಜಕರು ಎಂಬ ಮೂರು ಹುದ್ದೆಗಳಿದ್ದು, ಇದರಲ್ಲಿ ಆಯುಕ್ತರು ಪೂರ್ಣ ಪ್ರಮಾಣದಲ್ಲಿದ್ದರೆ ನಗರ ಯೋಜಕ ಸದಸ್ಯರು ಮತ್ತು ನಗರ ಯೋಜಕರು ಪ್ರಭಾರ ಆಗಿದ್ದಾರೆ. ನಗರ ಯೋಜಕ ಸದಸ್ಯರು ವಾರದಲ್ಲಿ ಒಂದು ದಿನ ಮತ್ತು ನಗರ ಯೋಜಕರು ವಾರದಲ್ಲಿ ನಾಲ್ಕು ದಿನ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಾರೆ.

ಸಿಂಗಲ್ ಲೇಔಟ್, ಕಟ್ಟಡ ಪರವಾನಿಗೆ ಸಂಬಂಧ ಅರ್ಜಿಗಳು ವಿಲೇವಾರಿ ಮಾಡದೆ ವಿಳಂಬ ಆಗುತ್ತಿದೆ. ಅದೇ ರೀತಿ ಸಿಆರ್‌ಝೆಡ್‌ಗೆ ಸಂಬಂಧಿಸಿದ ಅರ್ಜಿ ಕೂಡ ಬಾಕಿ ಇದೆ. ಈ ಕುರಿತು ಹಲವು ಬಾರಿ ಕಚೇರಿ ಬಂದು ಹೋಗಿ ಸಾಕಾಗಿದೆ. ಯಾವುದೇ ಪರಿಹಾರ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

‘ಇಲ್ಲಿನ ಯಾವುದೇ ಕಾರ್ಯ ಆಗಬೇಕಾದರೆ ಸ್ಥಳ ಪರಿಶೀಲನೆಯನ್ನು ನಗರ ಯೋಜಕ ಸದಸ್ಯರೇ ಮಾಡಬೇಕು. ಆದರೆ ಅವರು ವಾರದಲ್ಲಿ ಒಂದು ದಿನ ಮಾತ್ರ ಬಂದರೆ ಅದು ಹೇಗೆ ಸಾಧ್ಯವಾಗುತ್ತದೆ. ಹಾಗಾಗಿ ಸಾಕಷ್ಟು ಅರ್ಜಿಗಳು ಬಾಕಿ ಉಳಿದಿವೆ’ ಎಂದು ದಸಂಸ ಮುಖಂಡ ಸುಂದರ್ ಮಾಸ್ತರ್ ಆರೋಪಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮುಖ್ಯವಾಗಿ ಎರಡು ಪ್ರಭಾರ ಹುದ್ದೆಯನ್ನು ಪೂರ್ಣಪ್ರಮಾಣ ಮಾಡಬೇಕಾಗಿದೆ ಮತ್ತು ಹೆಚ್ಚುವರಿ ಹುದ್ದೆಯನ್ನು ಸೃಷ್ಠಿಸ ಬೇಕಾಗಿದೆ. ಇಲ್ಲಿ ತುಂಡು ಭೂಮಿ ಹೆಚ್ಚಿರುವುದರಿಂದ ಸಿಂಗಲ್ ಲೇಔಟ್ ಸೇರಿದಂತೆ ಕೆಲವು ಕಾನೂನುಗಳಲ್ಲಿ ತೊಡಕುಗಳಿವೆ. ಈ ಕಾನೂನುಗಳಿಂದ ಉಡುಪಿಗೆ ವಿನಾಯಿತಿ ನೀಡಬೇಕಾಗಿದೆ ಎಂದು ತಿಳಿಸಿದರು.

ಪ್ರಾಧಿಕಾರದ ಸಭೆಯನ್ನು ನ.22ರಂದು ಕರೆಯಲಾಗಿದ್ದು, ಅದರಲ್ಲಿ ಈ ವಿಷಯಗಳನ್ನು ಚರ್ಚಿಸಿ ನಿರ್ಣಯ ತೆಗೆದು ಕೊಂಡು ಇಲಾಖೆಯ ನಿರ್ದೇಶಕರಿಗೆ ಕಳುಹಿಸಿಕೊಡಲಾಗುವುದು. ಸದ್ಯದಲ್ಲೇ ಇಲ್ಲಿನ ಎರಡು ಹುದ್ದೆಗಳಿಗೆ ಶಾಶ್ವತ ಅಧಿಕಾರಿಗಳನ್ನು ನೇಮಕ ಮಾಡುವುದಾಗಿಯೂ ಅವರು ಈಗಾಗಲೇ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

"ಕಾನೂನಿ ತೊಡಕು ಹಾಗೂ ಅಧಿಕಾರಿಗಳ ಕೊರತೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆದುದರಿಂದ ಸರಕಾರ ಬೆಳೆಯುತ್ತಿರುವ ಉಡುಪಿ ಜಿಲ್ಲೆಯನ್ನು ಗಮನ ಹರಿಸಿ ಈ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡು ಕೊಳ್ಳಬೇಕು. ಈ ಸಮಸ್ಯೆಗಳಿಂದ ಬಡವರು ತುಂಬಾ ತೊಂದರೆ ಪಡುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲಿದ್ದರೆ ನಾಗರಿಕರೆಲ್ಲರು ಸೇರಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಬಹುದು"

-ಸುಂದರ್ ಮಾಸ್ತರ್, ದಸಂಸ ಮುಖಂಡರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News