ಬಾಕಿ ಇರುವ ಮನೆಹಾನಿ, ಬೆಳೆಹಾನಿ ಪರಿಹಾರ ತಕ್ಷಣ ವಿತರಿಸಿ: ಅಧಿಕಾರಿಗಳಿಗೆ ಎಡಿಸಿ ಮಮತಾದೇವಿ ಸೂಚನೆ

Update: 2024-11-20 15:41 GMT

ಉಡುಪಿ, ನ.20: ಕಳೆದ ಮುಂಗಾರು ಮಳೆ ಸಂದರ್ಭದಲ್ಲಿ ಮನೆಹಾನಿ ಹಾಗೂ ಬೆಳೆಹಾನಿಗೆ ಒಳಗಾದವರಿಗೆ ಪರಿಹಾರದ ಹಣ ನೀಡುವುದು ಬಾಕಿ ಇದ್ದಲ್ಲಿ ಆದಷ್ಟು ಬೇಗನೆ ಅರ್ಹ ಫಲಾನುಭವಿಗಳಿಗೆ ಪರಿಹಾರದ ಹಣವನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಈ ಬಾರಿ ಸುರಿದ ಅಧಿಕ ಮುಂಗಾರು ಮಳೆಯಿಂದ ಉಂಟಾದ ಮೂಲಸೌಕರ್ಯಗಳ ಹಾನಿಯ ಪುನರ್‌ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದ ಎಡಿಸಿ, ಪ್ರಾಕೃತಿಕ ವಿಕೋಪ ಯಾವುದೇ ಗಳಿಗೆಯಲ್ಲಿ ಸಂಭವಿಸುವ ಸಾಧ್ಯತೆ ಇರುವುದರಿಂದ ಅವುಗಳನ್ನು ಎದುರಿಸಲು ಸದಾ ಸನ್ನದ್ಧ ರಾಗಿರಬೇಕು ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ರಸ್ತೆ, ವಿದ್ಯುತ್ ಕಂಬ ಸೇರಿದಂತೆ ಹಲವು ಮೂಲಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಅವುಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ಸೂಚನೆಗಳನ್ನು ನೀಡಿದರು.

ಯಾವುದೇ ಇಲಾಖೆ ಈಗಾಗಲೇ ಆಗಿರುವ ಮನೆಹಾನಿ, ಮಾನವ ಜೀವ ಹಾನಿ, ಜಾನುವಾರು ಜೀವ ಹಾನಿಗೆ ಸಂಬಂಧಿಸಿ ದಂತೆ ಪರಿಹಾರ ಬಾಕಿ ಇರಿಸಿಕೊಳ್ಳಬಾರದು. ಶಾಲೆ, ಅಂಗನವಾಡಿ ಹಾಗೂ ರಸ್ತೆ ತುರ್ತು ದುರಸ್ಥಿ ಕಾರ್ಯಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತ್ವರಿತಗತಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿ ಸಬೇಕು ಎಂದ ಮಮತಾ ದೇವಿ, ತಹಶೀಲ್ದಾರರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಭೂಕುಸಿತದಿಂದಾಗುವ ಅಪಾಯಗಳನ್ನು ತಪ್ಪಿಸಿ,ಜನಹಾಗೂ ಜಾನುವಾರು ಗಳ ಜೀವಕ್ಕೆ ಅಪಾಯವಾಗದಂತೆ ಸಾಕಷ್ಟು ಮುಂಚಿತವಾಗಿಯೇ ಮುನ್ನೆಚ್ಚರಿಕಾ ಕಾಮಗಾರಿಗಳನ್ನು ನಿರ್ವಹಿಸುವ ಉದ್ದೇಶದಿಂದ ಈಗಾಗಲೇ ಜಿಲ್ಲಾ ವಿಪತ್ತು ನಿರ್ವ ಹಣಾ ಪ್ರಾಧಿಕಾರದಿಂದ ಭೂಕುಸಿತ ಪ್ರದೇಶಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳ ಲಾಗುತ್ತಿದೆ. ಇವುಗಳ ಗುಣಮಟ್ಟವನ್ನು ತಹಶೀಲ್ದಾರರು ಪರಿಶೀಲಿಸಬೇಕು ಎಂದರು.

ಜಿಲ್ಲಾ ವಿಪತ್ತು ನಿರ್ವಹಣಾ ಕಾರ್ಯಕ್ಕೆ ಈಗಾಗಲೇ ಪಿ.ಡಿ ಖಾತೆಯಲ್ಲಿ 10 ಕೋಟಿ 39 ಲಕ್ಷ ರೂ. ಅನುದಾನ ಲಭ್ಯವಿದೆ. ಈಗಾಗಲೇ ತಾಲೂಕು ಮಟ್ಟದ ತಹಶೀಲ್ದಾರರ ವಿಪತ್ತು ಪಿ.ಡಿ ಖಾತೆಯಲ್ಲಿ 163.42 ಲಕ್ಷ ರೂ. ಅನುದಾನ ಲಭ್ಯವಿದ್ದು, ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಅನುದಾನದಲ್ಲಿ ಯಾವುದೇ ಕೊರತೆ ಇರುವುದಿಲ್ಲ ಎಂದರು.

ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿ ಗಳು, ತಾಲೂಕು ತಹಶೀಲ್ದಾರ್‌ಗಳು, ತಾಲೂಕುಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News