ಹೆಬ್ರಿ| ಕೂಡ್ಲುವಿನ ಹುಟ್ಟೂರಿನಲ್ಲೇ ವಿಕ್ರಂ ಗೌಡ ಅಂತ್ಯಕ್ರಿಯೆ
ಹೆಬ್ರಿ: ತಾಲೂಕಿನ ಪೀತಬೈಲು ಎಂಬಲ್ಲಿ ಸೋಮವಾರ ರಾತ್ರಿ ನಕ್ಸಲ್ ನಿಗ್ರಹ ಪಡೆಯ ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಮ್ ಗೌಡ ಅವರ ಅಂತ್ಯಕ್ರಿಯೆಯು ಹುಟ್ಟೂರು ಹೆಬ್ರಿ ಕೂಡ್ಲುವಿನ ಮನೆಯ ತೋಟದಲ್ಲಿ ಬುಧವಾರ ಮಧ್ಯಾಹ್ನ ನೂರಾರು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಮಣಿಪಾಲ ಕೆಎಂಸಿಯಿಂದ ಅಂಬ್ಯುಲೆನ್ಸ್ ಮೂಲಕ ತರಲಾದ ವಿಕ್ರಂ ಗೌಡ ಮೃತದೇಹವನ್ನು ಕುಡ್ಲೂವಿನ ಅವರದ್ದೇ ಜಾಗದಲ್ಲಿ ಅಂಬ್ಯುಲೆನ್ಸ್‌ನ ಸ್ಟ್ರಕ್ಚರ್‌ನಲ್ಲಿಯೇ ಇರಿಸಲಾಯಿತು. ಬಳಿಕ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಯಿತು. ನೂರಾರು ಗ್ರಾಮಸ್ಥರು ಆಗಮಿಸಿ ಗಂಧದ ಹಾರ ಅರ್ಪಿಸಿ ದರ್ಶನ ಪಡೆದರು.
ತಂಗಿ ಸುಗುಣ ಕಣ್ಣೀರಿನೊಂದಿಗೆ ಒಡಹುಟ್ಟಿದ ಅಣ್ಣ ವಿಕ್ರಂ ಗೌಡಗೆ ಅಂತಿಮ ವಿದಾಯ ಹೇಳಿದರು. ಅಜ್ಜಿಯೊಬ್ಬರು ಮೃತ ದೇಹವನ್ನು ನೋಡಿ, ಮಗ ಮಗ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಬಳಿಕ ಅಲ್ಲೇ ಸಮೀಪದ ಅವರದ್ದೇ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ತಮ್ಮ ಸುರೇಶ್ ಗೌಡ ಚಿತೆಗೆ ಬೆಂಕಿ ಇಟ್ಟರು. ಈ ಸಂದರ್ಭದಲ್ಲಿ ನೂರಾರು ಮಂದಿ ಸಾಕ್ಷಿಯಾದರು.
ಬಿಗಿ ಪೊಲೀಸ್ ಭದ್ರತೆ: ಆರಂಭದಲ್ಲಿ ಮೃತದೇಹ ವೀಕ್ಷಣೆಗೆ ಪೊಲೀಸರು ಯಾರಿಗೂ ಅವಕಾಶ ನೀಡಿರಲಿಲ್ಲ. ಕ್ರಮೇಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸುತ್ತಿರುವುದು ಹೆಚ್ಚದಾಂತೆ ಪೊಲೀಸರು ಅಲ್ಲಿಂದ ನಿರ್ಗಮಿಸಿದರು. ಬಳಿಕ ಮನೆಯವರು ಮೃತದೇಹದ ದರ್ಶನಕ್ಕೆ ಗ್ರಾಮಸ್ಥರಿಗೆ ಅವಕಾಶ ಮಾಡಿಕೊಟ್ಟರು. ಅದೇ ರೀತಿ ಮಾಧ್ಯಮದ ವರನ್ನು ಕೂಡ ಸ್ವಲ್ಪ ದೂರದಲ್ಲಿಯೇ ತಡೆದು ನಿಲ್ಲಿಸಲಾಗಿತ್ತು.
ಸ್ಥಳದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಯನ್ನು ಒದಗಿಸಲಾಗಿತ್ತು. ಮನೆಗಿಂತ ಅರ್ಧ ಕಿ.ಮೀ. ದೂರದಲ್ಲಿ ಎರಡು ವಾಹನಗಳಲ್ಲಿ ಎಎನ್‌ಎಫ್ ತುಕಡಿಯನ್ನು ಇರಿಸ ಲಾಗಿತ್ತು. ಅಂತ್ಯಕ್ರಿಯೆ ವೇಳೆ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು ಮತ್ತು ವಿಡಿಯೋ ಚಿತ್ರೀಕರ ಣಗಳನ್ನು ಮಾಡಿದ್ದಾರೆ.
ಕುಟುಂಬಸ್ಥರಿಗೆ ಹಸ್ತಾಂತರ: ಮಣಿಪಾಲ ಕೆಎಂಸಿಯ ಶವಗಾರದಲ್ಲಿವ ವಿಕ್ರಮ್ ಗೌಡ ಅವರ ಮೃತದೇಹ ಪಂಚನಾಮೆ ಯನ್ನು ಮಂಗವಾರ ತಡರಾತ್ರಿ ವೇಳೆ ಕಾರ್ಕಳದ ನ್ಯಾಯಾಧೀಶೆ ನೆರವೇರಿಸಿದರು. ಬಳಿಕ ಬುಧವಾರ ನಸುಕಿನ ವೇಳೆ 3ಗಂಟೆ ಸುಮಾರಿಗೆ ಮರಣೋತ್ತರ ಪರೀಕ್ಷೆಯನ್ನು ಆರಂಭಿಸಲಾಯಿತು. ಬೆಳಗಿನ ಜಾವ ೫ಗಂಟೆ ಸುಮಾರಿಗೆ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿತ್ತು ಎಂದು ತಿಳಿದು ಬಂದಿದೆ.
ಬುಧವಾರ ಬೆಳಗ್ಗೆ ಶವಗಾರಕ್ಕೆ ಮೃತರ ತಮ್ಮ ಸುರೇಶ್ ಗೌಡ ಹಾಗೂ ತಂಗಿ ಸುಗುಣ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದು, ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ನಂತರ ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಹೆಬ್ರಿ ಸಮೀಪದ ಕೂಡ್ಲುವಿನಲ್ಲಿರುವ ವಿಕ್ರಂ ಗೌಡ ಅವರ ಮೂಲಮನೆಗೆ ಕೊಂಡೊಯ್ಯ ಲಾಯಿತು. ಈ ವೇಳೆ ಪೊಲೀಸ್ ಭದ್ರತೆಯನ್ನು ಕೂಡ ಒದಗಿಸಲಾಯಿತು.
‘ಅಣ್ಣನನ್ನು ಅನಾಥ ಶವವಾಗಿ ಸುಡುವುದು ಬೇಡ’
ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡುವುದೇ ಅಥವಾ ಪೊಲೀಸರೇ ಅಂತ್ಯಕ್ರಿಯೆ ನಡೆಸುವುದೇ ಎಂಬ ಗೊಂದಲ ಮಂಗಳವಾರ ನಿರ್ಮಾಣವಾಗಿತ್ತು. ಬಳಿಕ ತಂಗಿ ಸುಗುಣ ಮತ್ತು ತಮ್ಮ ಸುರೇಶ್ ಗೌಡ ತೀರ್ಮಾನ ಮಾಡಿ, ಹುಟ್ಟೂರಿನಲ್ಲಿಯೇ ಅಂತ್ಯ ಕ್ರಿಯೆ ಮಾಡಲು ಮುಂದಾದರು.
ಮೃತದೇಹ ಪಡೆಯಲು ಶವಗಾರಕ್ಕೆ ಬಂದಿದ್ದ ತಂಗಿ ಸುಗುಣ, ಈ ಬಗ್ಗೆ ಪ್ರತಿಕ್ರಿಯಿಸಿ, ಕೂಡ್ಲುವಿನಲ್ಲಿ ಅವನೇ ಮಾಡಿ ಇಟ್ಟ ಜಾಗ ಮತ್ತು ತೋಟ ಇದೆ. ಅನಾಥ ಶವ ಆಗಿ ಅವನನ್ನು ಸುಡುವುದು ಬೇಡ ಎಂದು, ಮನೆಯ ಜಾಗದಲ್ಲೇ ಅಂತ್ಯಕ್ರಿಯೆ ಮಾಡುವ ನಿರ್ಧಾರ ಮಾಡಿದ್ದೇವೆ. ನಾವು ಮೂವರು ಹುಟ್ಟಿ ಬೆಳೆದ ಜಾಗ ಅದು. ಹಾಗಾಗಿ ಅಣ್ಣ ಮತ್ತು ನಾವು ಮಾತನಾ ಡಿಕೊಂಡು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಅಲ್ಲಿ ಸುಮಾರು ಒಂದು ಎಕರೆ ಜಾಗ ಇದೆ ಎಂದರು.
‘ಎಲ್ಲವೂ ಆಗಿ ಹೋಗಿದೆ, ಏನು ಮಾಡುವುದು. ಮೊದಲೇ ಅವರು ಶರಣಾಗಿ ಮುಖ್ಯವಾಹಿನಿಗೆ ಬರುತ್ತಿದ್ದರೆ ಒಳ್ಳೆಯದಾ ಗುತ್ತಿತ್ತು. ಆದರೆ ಏನು ಮಾಡುವುದು. ಎನಿಸುವಾಗ ನೋವು ಆಗುತ್ತದೆ. ಮುಂದಿನ ಕಾರ್ಯದ ಬಗ್ಗೆ ತಂಗಿ ಜೊತೆ ಮಾತ ನಾಡಿ ನಿರ್ಧಾರ ಮಾಡುತ್ತೇನೆ. ಒಳ್ಳೆಯ ರೀತಿ ಕೆಲಸ ಮಾಡಿಕೊಂಡಿದ್ದನು. ಅವನೇ ತಂಗಿಗೆ ಮದುವೆ ಮಾಡಿಸಿಕೊಟ್ಟಿದ್ದನು’
-ಸುರೇಶ್ ಗೌಡ, ಮೃತ ವಿಕ್ರಂ ಗೌಡನ ಸಹೋದರ
‘ನಮ್ಮೂರಿನ ಹುಡುಗ ನಕ್ಸಲ್ ಚಟುವಟಿಕೆಗೆ ಸೇರಿ ದಾರುಣ ಅಂತ್ಯ ಕಂಡಿರುವುದು ತುಂಬಾ ನೋವಿದೆ. ಈ ರೀತಿ ಬಂದೂಕು ಹಿಡಿದು ಹೋರಾಟ ಮಾಡಿದರೆ ಕೊನೆಗೆ ಉತ್ತರ ಸಿಗುವುದು ಇದೇ ಎಂಬುದನ್ನು ಎಲ್ಲರು ಅರಿಯ ಬೇಕು. ಕಸ್ತೂರಿ ರಂಗನ್ ವರದಿಯಿಂದ ನಮ್ಮ ಈ ಭಾಗಕ್ಕೆ ಬಹಳಷ್ಟು ಸಮಸ್ಯೆ ಆಗಲಿದೆ. ಇಲ್ಲಿ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಅಭಿವೃದ್ಧಿ ಚಟುವಚಟಿಕೆ ದೂರ ಉಳಿಯಲಿದೆ. ಹಾಗಾಗಿ ಇದರ ವಿರುದ್ಧ ಹೋರಾಟಗಳನ್ನು ಸ್ಥಳೀಯ ನಾಯಕತ್ವ ಮೂಲ ಮಾಡಬೇಕೆ ಹೊರತು ಬಂದೂಕು ಇಟ್ಟುಕೊಂಡು ಕಾಡಿನಲ್ಲಿ ಓಡಾಟ ಮಾಡುವುದರಿಂದ ಪರಿಹಾರ ಸಿಗಲು ಸಾಧ್ಯವಿಲ್ಲ’
-ತಿಂಗಳೆ ವಿಕ್ರಮಾರ್ಜನ ಹೆಗ್ಡೆ, ಸ್ಥಳೀಯರು
ಇಂತಹ ಸಾವು ಆಗಬಾರದಿತ್ತು: ಗೆಳೆಯ ಮಹೇಶ್ ಶೆಟ್ಟಿ ನೋವಿನ ನುಡಿ
ಹೆಬ್ರಿ: ‘ಅರಣ್ಯ ಇಲಾಖೆಯವರು ವಿಕ್ರಂ ಗೌಡನಿಗೆ ನೀಡಿದ ನಿರಂತರ ಕಿರುಕುಳ ದಿಂದಲೇ ಆತ ಅನಿವಾರ್ಯವಾಗಿ ನಕ್ಸಲರ ಜೊತೆ ಕಾಡಿಗೆ ಹೋಗಿ ಸೇರಿ ಕೊಂಡನು...’
ಇದು ಎನ್‌ಕೌಂಟರ್‌ಗೆ ಬಲಿಯಾದ ವಿಕ್ರಂ ಗೌಡನೊಂದಿಗೆ ನಾಡಿನಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ಗೆಳೆಯ ಕೂಡ್ಲುವಿನ ಮಹೇಶ್ ಶೆಟ್ಟಿ ಅವರ ನೋವಿನ ಮಾತುಗಳು.
‘20 ವರ್ಷಗಳ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಒಕ್ಕಲೆಬ್ಬಿಸುವ ವಿರುದ್ಧ ಹೋರಾಟಗಳು ನಡೆಯುತ್ತಿದ್ದವು. ಆಗ ಕರ್ನಾಟಕ ವಿಮೋಚನ ರಂಗ ಸಂಘಟನೆಯ ಮೂಲಕ ಈ ಹೋರಾಟಕ್ಕೆ ಇಳಿದಿದ್ದನು. ಅವನೊಂದಿಗೆ ಆಗ ನಾವು ಗ್ರಾಮಸ್ಥರೆಲ್ಲ ಹೋರಾಟ ಅಣಿಯಾಗಿ, ಹೆಬ್ರಿ, ಶೃಂಗೇರಿಯಲ್ಲಿ ಧರಣಿ ಪ್ರತಿಭಟನೆಗಳನ್ನು ನಡೆಸಿದ್ದೆವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ನಕ್ಸಲರ ಬಗ್ಗೆ ವಿಕ್ರಂ ಗೌಡನಿಗೆ ಕಿರುಕುಳ ನೀಡಲು ಆರಂಭಿಸಿದರು. ಈ ಕಿರುಕುಳ ತಾಳಲಾರದೆ ಅವ ಮುಂದೆ ನೇರವಾಗಿ ಅವರ ಜೊತೆ ಕಾಡಿಗೆ ಹೋಗಿ ಸೇರಿಕೊಂಡನು’ ಎಂದರು.
‘ನಕ್ಸಲರೊಂದಿಗೆ ಹೋಗುವ ಮೊದಲು ಅವನು ಕೂಲಿ ಕೆಲಸ ಮಾಡಿಕೊಂಡಿದ್ದನು. ಎಲ್ಲರ ಮನೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದನು. ಹೆಬ್ರಿ, ಮುಂಬೈಯಲ್ಲಿ ಕೆಲಸ ಮಾಡಿದ್ದನು. ಅಷ್ಟು ಒಳ್ಳೆಯ ಹುಡುಗನಿಗೆ ಇಂತಹ ಸಾವು ಆಗಬಾರದಿತ್ತು. ಬಂದೂಕು ಇಟ್ಟುಕೊಂಡು ಹೋರಾಟ ನಡೆಸುವ ಬದಲು ನಾಡಿನಲ್ಲಿಯೇ ಇದ್ದು ಅವನಿಗೆ ಹೋರಾಟ ಮಾಡಬೇಕಾಗಿತ್ತು. ಆದರೆ ಅನಿವಾರ್ಯವಾಗಿ ಅವರೊಂದಿಗೆ ಕಾಡು ಹೋಗಿದ್ದನು. ಇಲ್ಲಿಯೇ ಇದ್ದಿದ್ದರೆ ಅವನ ಜೀವಕ್ಕೆ ಅಪಾಯ ಬರುತ್ತದೆ ಎಂಬ ಕಾರಣಕ್ಕೆ ನಕ್ಸಲರ ಜೊತೆ ಸೇರಿಕೊಂಡನು’ ಎಂದು ಅವರು ತಿಳಿಸಿದರು.
ನಮ್ಮ ಊರಿನ ಹುಡುಗ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಬಗ್ಗೆ ಗ್ರಾಮಸ್ಥರಿಗೆ ತುಂಬಾ ನೋವು ಆಗಿದೆ. ಮೊದಲು ನಕ್ಸಲರು ನಮ್ಮ ಮನೆಗಳಿಗೂ ಬರುತ್ತಿದ್ದರು. ಅಕ್ಕಿ ಪಡಿತರ ನೀಡುವಂತೆ ಕೇಳುತ್ತಿದ್ದರು. ಗನ್ ಇಟ್ಟುಕೊಂಡಿ ರುವುದರಿಂದ ನಾವು ಅನಿವಾರ್ಯವಾಗಿ ಕೊಡುತ್ತಿದ್ದೇವು’ ಎಂದು ಅವರು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.
‘ಎರಡೂ ಪಕ್ಷಗಳಿಂದ ಕಣ್ಣಿಗೆ ಮಣ್ಣೆರೆಚುವ ಕಾರ್ಯ’
‘ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳು ಒಂದೇ. ಚುನಾವಣೆ ಬರುವಾಗ ಕಸ್ತೂರಿ ರಂಗನ್ ವರದಿ ಇವರಿಗೆ ನೆನಪಾಗುತ್ತದೆ. ಕಾಂಗ್ರೆಸ್‌ನವರು ಇದು ಬಿಜೆಪಿ ಸರಕಾರ ಮಾಡಿರುವುದು ಎಂದು ಹೇಳಿದರೆ, ಬಿಜೆಪಿಯವರು ಇದನ್ನು ಕಾಂಗ್ರೆಸ್ ಸರಕಾರ ಮಾಡಿದ್ದು ಹೇಳುತ್ತಾರೆ. ಹೀಗೆ ಅವರು ನಮ್ಮ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಮಾಡುತ್ತಿದ್ದಾರೆ’ ಎಂದು ಮಹೇಶ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲೇ ಸಮೀಪ ಪ್ರವಾಸಿ ತಾಣವಾಗಿರುವ ಕೂಡ್ಲು ಜಲಪಾತ ಇದೆ. ಅಲ್ಲಿ ಗೇಟು ನಿರ್ಮಿಸಿ ಹಣ ಸಂಗ್ರಹ ಮಾಡಲಾಗುತ್ತಿದೆ. ಆದರೆ ಅದರಲ್ಲಿನ ನಯಾ ಪೈಸೆಯನ್ನು ಇಲ್ಲಿ ಹದಗೆಟ್ಟಿರುವ ರಸ್ತೆ ದುರಸ್ತಿಗೆ ನೀಡಲ್ಲ. ಇಲ್ಲೊಂದು ಕಮಿಟಿ ಮಾಡಿದ್ದಾರೆ. ಅದು ಕೇವಲ ಹೆಸರಿಗೆ ಮಾತ್ರ ಇದೆ. ಇಲ್ಲಿ ಬಸ್ ವ್ಯವಸ್ಥೆ ಕೂಡ ಇಲ್ಲ. ಮೇಗದ್ದೆಯಲ್ಲಿ ಸೇತುವೆ ನಿರ್ಮಿಸಿರುವುದು ಬಿಟ್ಟರೆ ಇಲ್ಲಿ ಏನು ಕೆಲಸ ಆಗಿಲ್ಲ ಎಂದು ಅವರು ಆರೋಪಿಸಿದರು.