ಮಂಗಳೂರು ವಿವಿ ಅಂತರ ಕಾಲೇಜು ಅತ್ಲೆಟಿಕ್ ಕೂಟಕ್ಕೆ ಚಾಲನೆ
ಉಡುಪಿ, ನ.29: ಮಂಗಳೂರು ವಿವಿ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಶುಕ್ರವಾರ ಉಡುಪಿ ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶಾಸಕ ಯಶಪಾಲ್ ಸುವರ್ಣ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದರು.
ಕ್ರೀಡಾಕೂಟವನ್ನು ಮಂಗಳೂರು ವಿವಿ, ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಹಾಗೂ ಲಿಯೋ ಡಿಸ್ಟ್ರಿಕ್ ಉಡುಪಿ ಸಂಯುಕ್ತವಾಗಿ ಹಮ್ಮಿಕೊಂಡಿವೆ.
ಈ ಸಂದರ್ಭ ಮಾತನಾಡಿದ ಅವರು ಕ್ರೀಡೆ ನಮ್ಮ ದೈಹಿಕ ಕ್ಷಮತೆಯನ್ನು ಮಾತ್ರವಲ್ಲ ಮನೋಬಲವನ್ನು ಹೆಚ್ಚಿಸುತ್ತದೆ. ಯುವಜನತೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಕಾರಾತ್ಮಕವಾಗಿ ಬೆಳೆದಾಗ ಸಂಸ್ಥೆಗೂ ಸಮಾಜಕ್ಕೂ ಶ್ರೇಯಸ್ಸು ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಅತ್ಲೆಟಿಕ್ ಫೆಡರೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಮಲ್ಪೆಯ ಉದ್ಯಮಿ ಆನಂದ ಸುವರ್ಣ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿ’ಸೋಜ, ಕಾಲೇಜಿನ ಪ್ರಾಂಶು ಪಾಲರಾದ ಪ್ರೊ. ನಿತ್ಯಾನಂದ ವಿ.ಗಾಂವಕರ, ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಕಾರ್ಯದರ್ಶಿ ಡಾ.ಕೆ. ರಾಮಚಂದ್ರ, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದ ಆಯೋಜಕ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆಯ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರಶಾಂತ ನೀಲಾವರ ವಂದಿಸಿದರು.