ಮಹಾಲಕ್ಷ್ಮೀ ಬ್ಯಾಂಕ್ ಅವ್ಯವಹಾರ ಆರೋಪ: ಮಲ್ಪೆ ಠಾಣೆ ಎದುರು ಸಂತ್ರಸ್ತರಿಂದ ಧರಣಿ
ಮಲ್ಪೆ, ನ.29: ಮಹಾಲಕ್ಷ್ಮಿ ಕೋಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಬ್ಯಾಂಕಿನ ಅಧಿಕಾರಿ, ಸಿಬ್ಬಂದಿ ಹಾಗೂ ಅಧ್ಯಕ್ಷ ಯಶ್ಪಾಲ್ ಸುವರ್ಣ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಇಂದು ಮಲ್ಪೆ ಪೊಲೀಸ್ ಠಾಣೆಯ ಎದುರು ಸಂತ್ರಸ್ತರು ಧರಣಿ ನಡೆಸಿದರು.
ಬಳಿಕ ಈ ಕುರಿತ ಮನವಿಯನ್ನು ಮಲ್ಪೆ ಠಾಣಾಧಿಕಾರಿಗಳ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಯಿತು. ಬ್ಯಾಂಕಿನ ಅವ್ಯವಹಾರಕ್ಕೆ ಸಂಬಂಧಿಸಿ ಮಲ್ಪೆಶಾಖೆಯ ಮ್ಯಾನೇಜರ್ ಸಿಬ್ಬಂದಿ ಹಾಗೂ ಬ್ಯಾಂಕಿನ ಅಧ್ಯಕ್ಷ ಯಶಾಲ್ ಸುವರ್ಣ ವಿರುದ್ಧ ಹಲವಾರು ದೂರುಗಳು ದಾಖಲಾಗಿವೆ. 2021ರಲ್ಲಿ ಕೋವಿಡ್ ಸಂದರ್ಭದಲ್ಲಿ ಸುಮಾರು 1400ಕ್ಕೂ ಹೆಚ್ಚು ಮಂದಿಯನ್ನು ಬ್ಯಾಂಕಿನ ಸದಸ್ಯರುಗಳಾಗಿ ಎರಡು ಲಕ್ಷ ರೂ ಸಾಲ ಕೊಡುತ್ತೇವೆ ಎಂದು ತಿಳಿಸಿ, ಅವರಿಂದ ಅಗತ್ಯ ದಾಖಲೆಗಳನ್ನು ಸಾಲ ಪತ್ರದ ಮೇಲೆ ಯಾವುದೇ ಹಣ ನಮೂದಿಸದೆ 20,000ರೂ. ಕೊಡುವುದಾಗಿ ತಿಳಿಸಿ, ಅವರ ಸಹಿ ಪಡೆದು ಸ್ವಲ್ಪಮೊತ್ತದ ಹಣವನ್ನು ಪಾವತಿಸಿದ್ದಾರೆ.
ಈ ಅವ್ಯವಹಾರವು ಸುಮಾರು 25 ಕೋಟಿಗಿಂತಲೂ ಹೆಚ್ಚು ಆಗಿದ್ದು ಬ್ಯಾಂಕಿನ ಅಧ್ಯಕ್ಷರು ಹಾಗೂ ಸಿಬ್ಬಂದಿ ಬಡ ಜನರನ್ನು ದುರುದ್ದೇಶ ಪೂರ್ವಕ ವಾಗಿ ವಂಚಿಸಿ ಮೋಸ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಸಲಾಗಿದೆ.
ಈ ಎಲ್ಲಾ ಅವ್ಯವಹಾರಗಳ ಹಿಂದೆ ಮಹಾಲಕ್ಷ್ಮಿ ಬ್ಯಾಂಕಿನ ಸಿಬ್ಬಂದಿ, ಅಧ್ಯಕ್ಷ ಯಶ್ಪಾಲ್ ಸುವರ್ಣ ಹಾಗೂ ಅಂದಿನ ಎಂಡಿ ಆಗಿದ್ದ ಜಿ.ಕೆ.ಶೀನ, ಜಗದೀಶ್ ಮೊಗವೀರ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಸಾರಿಕಾ ಕಿರಣ್ ಕೂಡ ಭಾಗಿ ಆಗಿದ್ದಾರೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬಡ ಜನರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಹೋರಾಟಗಾರ ನಾಗೇಂದ್ರ ಪುತ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ದೀಪಕ್ ಡಿ.ಶೆಣೈ, ರಕ್ಷಾ ಎಸ್., ಶಾಹಿನಾ, ಅಫ್ರೀನ್, ನವೀನ್ ಸಾಲ್ಯಾನ್, ಗೋಪಾಲ್, ಜಗನ್ನಾಥ್ ಅಮೀನ್ ಹಾಗೂ ಹಲವು ಸಂತ್ರಸ್ತರು ಉಪಸ್ಥಿತರಿದ್ದರು.