‘ಉಡುಪಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲು ಸಿಎಂ ಬಳಿ ನಿಯೋಗ’
ಉಡುಪಿ: ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಸಲುವಾಗಿ ಮುಂಬರುವ ವಿಧಾನಸಭಾ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಜಿಲ್ಲೆಯ ಶಾಸಕರೊಳಗೊಂಡ ನಿಯೋಗ ತೆರಳಿ ಮನವಿ ಸಲ್ಲಿಸಲಾಗು ವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ ಸುಮಾರು ಒಂದು ವರ್ಷದ ಬಳಿಕ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವೆ, ಜಿಲ್ಲೆಯ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಆದೇಶಿಸಿದರು.
ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಜಿಲ್ಲೆಯ ಇಲಾಖಾವಾರು ಸಮಸ್ಯೆಗಳನ್ನು ಆಲಿಸಿ, ಮಾಹಿತಿ ಪಡೆದುಕೊಂಡ ಸಚಿವರು, ಮಾಹಿತಿ ಕೊರತೆಯಿಂದ ಸಭೆಯಲ್ಲಿ ಉತ್ತರಿಸಲು ಪರದಾಡಿದ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಉಡುಪಿ ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ವರಾಹಿ ನದಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು. ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗಿದೆ ಎಂಬುದರ ವೈಜ್ಞಾನಿಕ ವರದಿಯನ್ನು ನೀಡಲು ಸೂಚನೆ ನೀಡಿದರು. ಕಳೆದ 4-5 ವರ್ಷಗಳಲ್ಲಿ 666 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ನವೆಂಬರ್ ಒಳಗೆ ಅವುಗಳಿಗೆ ಹಲಗೆ ಅಳವಡಿಸುವ ಕಾರ್ಯ ಮಾಡ ಬೇಕಾಗಿತ್ತು. ಬಾಕಿ ಉಳಿದ ಶೇ.50ರಷ್ಟು ಅಣೆಕಟ್ಟುಗಳಿಗೆ ಡಿಸೆಂಬರ್ ೨೦ರೊಳಗೆ ಹಲಗೆ ಅಳವಡಿಸುವಂತೆ ತಿಳಿಸಿದರು. ದುರಸ್ಥಿಗಾಗಿ ಬಿಡುಗಡೆ ಯಾದ ಅನುವಾದವನ್ನು ಸಂಪೂರ್ಣವಾಗಿ ಬಳಸುವಂತೆ ಸೂಚಿಸಿದರು.
ನಗರಾಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ 15 ದಿನಗಳಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿ ದರಲ್ಲದೇ, ಮೀನುಗಾರಿಕೆಗೆ ಅನುಕೂಲವಾಗುವ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿ ಶೇ.೮೦ರಷ್ಟು ಮುಗಿದಿದ್ದು, ಬಾಕಿ ಉಳಿದ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಸೂಚನೆ ನೀಡಿದರು.
ಹಂಗಾರಕಟ್ಟೆಯಲ್ಲಿ ಕೋಸ್ಟಲ್ ಬರ್ತ್ ಕಾಮಗಾರಿಗೆ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಅನುಮೋದನೆ ದೊರಕಿದೆ. ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದ ಅವರು, ಗಂಗೊಳ್ಳಿ ಯ ಕೋಸ್ಟಲ್ ಬರ್ತ್ ಕಾಮಗಾರಿ ಕೈಗೊಳ್ಳಲು ಸಿಆರ್‌ಝೆಡ್‌ನ ನಿರಾಕ್ಷೇಪಣಾ ಪತ್ರ ಪಡೆದು ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಮಾಡಲು ಈಗಾಗಲೇ ಜಮೀನು ಮಂಜೂರಾಗಿದ್ದು, 69 ಎಕರೆ ವ್ಯಾಪ್ತಿ ಯಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಮರ ತೆರವುಗೊಳಿಸುವ ಸಂದರ್ಭದಲ್ಲಿ ಆದಷ್ಟು ಮರಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಹೊಸ ಹಾಸ್ಟೆಲ್‌ಗಳಿಗೆ ಬೇಡಿಕೆ: ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸ್ತುತ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಈಗಾಗಲೇ ಹೊಸದಾಗಿ ಎರಡು ಹಾಸ್ಟೆಲ್ ಗಳು ಮಂಜೂರಾಗಿದ್ದು, ಹೆಚ್ಚುವರಿ ಹಾಸ್ಟೆಲ್‌ಗಳನ್ನು ತೆರೆಯಲು ಸಭೆಯಲ್ಲಿ ಶಾಸಕರು ಸಚಿವರಿಗೆ ಮನವಿ ಮಾಡಿದರು. ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ತಾಂತ್ರಿಕ ಕಾರಣಗಳಿಂದ ಸರಿಯಾಗಿ ಘನತಾಜ್ಯ ವಿಲೇವಾರಿ ವೈಜ್ಞಾನಿಕ ರೀತಿಯಲ್ಲಿ ಆಗುತ್ತಿಲ್ಲ. ಇದನ್ನೂ ಕೂಡಲೇ ಬಗೆಹರಿಸಿ, ಜಿಲ್ಲೆಯನ್ನು ತ್ಯಾಜ್ಯ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಜನ ಸಾಮಾನ್ಯರು ಮನೆಕಟ್ಟುವ ಅನುಮತಿ ಪಡೆಯಲು ತುಂಬಾ ತೊಂದರೆ ಅನುಭವಿಸುತ್ತಿದ್ದು, ವಿಶೇಷವಾಗಿ ಜಿಲ್ಲೆಯಲ್ಲಿ ೯-೧೧ ಸಮಸ್ಯೆ ಇದ್ದು, ಆರ್‌ಡಿಪಿಆರ್, ಕಂದಾಯ, ನಗರಾಭಿವೃದ್ಧಿ ಇಲಾಖೆಗಳು ಸಮಸ್ಯೆಗಳನ್ನು ಕೂಡಲೇ ಬಗೆಹರಿಸಲು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಸುನೀಲ್‌ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಎ ಸುವರ್ಣ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಡಿಎಫ್‌ಓ ಗಣಪತಿ, ವೈಲ್ಡ್ ಲೈಫ್ ಡಿಎಫ್‌ಓ ಶಿವರಾಮ ಎಂ ಬಾಬು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಕೆಡಿಪಿಯ ಸದಸ್ಯರು ಉಪಸ್ಥಿತರಿದ್ದರು.