ಹುತಾತ್ಮ ಯೋಧ ಅನೂಪ್ ಪೂಜಾರಿ ಮನೆಗೆ ಭೇಟಿ
ಕುಂದಾಪುರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ದುರಂತದಲ್ಲಿ ಮಡಿದ ಕುಂದಾಪುರ ಮೂಲದ ಅನೂಪ್ ಪೂಜಾರಿಯವರ ಬೀಜಾಡಿಯ ನಿವಾಸಕ್ಕೆ ಕಳೆದ ವರ್ಷ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ತಂದೆ ಎಂ.ವೆಂಕಟೇಶ್ ಭೇಟಿ ನೀಡಿ ತಾಯಿ, ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವಾನ ಹೇಳಿದರು.
ನಾನು ಕೂಡ ಮಗನನ್ನು ಅಗಲಿದ್ದು ಈ ನೋವು ನನಗೂ ತಿಳಿದಿದೆ. ಆದರೆ ದೇಶಕ್ಕಾಗಿ ಮಗ ಪ್ರಾಣ ತ್ಯಾಗ ಮಾಡಿದರು ಎಂಬ ಹೆಮ್ಮೆ ನಮಗೆ ಇದೆ. ಸೈನಿಕರು ಸಮಾಜದ ಆಸ್ತಿ. ದೇಶಕ್ಕಾಗಿ ಮಡಿದವರ ಜೊತೆ ಸಮಾಜ ಜೊತೆಯಾಗಿ ನಿಲ್ಲುತ್ತದೆ ಎಂದು ಅವರು ಕುಟುಂಬಿಕರಿಗೆ ಧೈರ್ಯ ಹೇಳಿದರು.
ಈ ಸಂದರ್ಭ ನಿವೃತ್ತ ವಾಯುಸೇನೆ ಅಧಿಕಾರಿ ಶ್ರೀಕಾಂತ ಶೆಟ್ಟಿ, ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸತ್ಯಜಿತ್ ಸುರತ್ಕಲ್, ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಉಪಸ್ಥಿತರಿದ್ದರು.
ಮಾಜಿ ಸಭಾಪತಿ ಭೇಟಿ: ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಮೃತ ಯೋಧ ಅನೂಪ್ ಪೂಜಾರಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭ ಮುಖಂಡರಾದ ಅಶೋಕ್ ಪೂಜಾರಿ ಬೀಜಾಡಿ, ಸದಾನಂದ ಶೆಟ್ಟಿ ಕೆದೂರು, ಚಂದ್ರಶೇಖರ ಶೆಟ್ಟಿ ಮೊಳಹಳ್ಳಿ ಮೊದಲಾದವರಿದ್ದರು.