ಸಾಮಾನ್ಯ ಜನರಿಗೂ ಭಗವದ್ಗೀತೆ ಮಹತ್ವ ತಿಳಿದಿದೆ: ಪುತ್ತಿಗೆ ಸ್ವಾಮೀಜಿ
ಉಡುಪಿ, ಡಿ.29: ಭಗವತ್ ಗೀತೆಯ ಪ್ರಭಾವ ಎಲ್ಲರೂ ತಿಳಿದು ಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಗೂ ಇದರ ಮಹತ್ವ ತಿಳಿದಿದೆ. ಜ್ಞಾನಿಗಳಿಂದ ಹಿಡಿದು ಸಾಮಾನ್ಯರು, ವಿದೇಶಿಗರು, ಅನ್ಯಧರ್ಮಿಯರು ಕೂಡ ಕೋಟಿ ಗೀತಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದಕ್ಕೆಲ್ಲ ಸಾಕ್ಷಿಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದಲ್ಲಿ ರವಿವಾರ ನಡೆದ ಬೃಹತ್ ಗೀತೋತ್ಸವದ ಮಂಗಳೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಜಗತ್ತಿಗೆ ಒಳಿತಾಗುವ ನಿಟ್ಟಿನಲ್ಲಿ ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಮಾರ್ಗದರ್ಶನ ಹಾಗೂ ಸಂದೇಶ ನೀಡಿದ್ದಾನೆ. ಈ ಸಂದೇಶ ಜಗತ್ತಿನ ಎಲ್ಲ ವ್ಯಕ್ತಿಗಳಿಗೂ ಸಂಬಂಧಪಟ್ಟಿದೆ. ಭಗವದ್ಗೀತೆ ಅಂಶಗಳೇ ಅಂತಿಮ ತೀರ್ಪಾಗಿದೆ ಎಂದರು.
ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ದಿನೇಶ್ ಪಿ.ಎಸ್. ಮಾತನಾಡಿ, ಸನಾತನ ಧರ್ಮದಂತೆ ಕಾರ್ಯಾಂಗ ನಡೆಯುತ್ತಿದೆ. ಭಗವದ್ಗೀತೆ ಮತ್ತು ನ್ಯಾಯಾಂಗದ ಅಗತ್ಯ ಬಹಳಷ್ಟಿದೆ. ವರ್ತಮಾನದ ಸ್ಥಿತಿಯಲ್ಲಿ ಕಾನೂನು ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳು ಕಾನೂನು ಪ್ರಕಾರವಾಗಿ ನಡೆಯುತ್ತಿದೆ. ಈಗ ನಡೆಯುತ್ತಿರುವುದು ಸಂವಿಧಾನದ ಅಡಿಯಲ್ಲಿ ಬರುವ ಕಾನೂನು. ಭಗವದ್ಗೀತೆ ಮಹಾಭಾರತದ ಒಂದು ಅಂಗವಾಗಿದೆ ಎಂದರು. 2025ರ ವಿಶ್ವಾಸ ನಾಮ ಸಂವತ್ಸರದ ನೂತನ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಪರ್ಯಾಯ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಶಾಸಕರಾದ ಯಶ್‌ಪಾಲ್ ಎ.ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.