ಸತಾಯಿಸದೆ ಜನರ ಸೇವೆ ಮಾಡಿ: ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್

Update: 2025-01-16 12:51 GMT

ಹೆಬ್ರಿ, ಜ.16: ಸರಕಾರಿ ಹುದ್ದೆಯಲ್ಲಿರುವ ನಾವೆಲ್ಲ ಸಾರ್ವಜನಿಕರ ಸೇವೆ ಮಾಡಲು ಬಂದಿದ್ದು, ಸೇವೆಯಲ್ಲಿ ವಿಳಂಬವಾ ದಾಗ ಪ್ರಶ್ನಿಸುವ ಹಕ್ಕು ಸಾರ್ವಜನಿಕರಿಗೆ ಇದೆ. ಸತಾಯಿಸದೆ ಜನರ ಸೇವೆಯನ್ನು ಮಾಡಬೇಕು ಎಂದು ಉಡುಪಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಹೇಳಿದ್ದಾರೆ.

ಹೆಬ್ರಿಯ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಅಜೆಕಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಭಾರೀ ಪ್ರಮಾಣದ ಅವ್ಯವ ಹಾರ ನಡೆದಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕಡ್ತಲ ನಿವಾಸಿ ಆನಂದ ನಾಯಕ್ ದೂರು ನೀಡಿದರು. ಡಿವೈಎಸ್ಪಿಪ್ರತಿಕ್ರಿಯಿಸಿ ಸೂಕ್ತ ದಾಖಲೆಗಳನ್ನು ನೀಡಿದರೆ ತನಿಖೆ ನಡೆಸಲಾಗುವುದೆಂದರು.

ಅಧಿಕಾರಿಗಳಿಗೆ ಯಾರಾದರೂ ಪೋನಾಯಿಸಿ ಲೋಕಾಯುಕ್ತ ಎಂದು ಸುಳ್ಳು ಹೇಳಿ ಹಣ ಕೇಳಿದರೆ, ತಕ್ಷಣದಲ್ಲಿ ಲಿಖಿತ ರೂಪದಲ್ಲಿ ದೂರು ನೀಡಬೇಕು. ನಾವು ತ್ವರಿತವಾಗಿ ಕ್ರಮ ಜರುಗಿಸುತ್ತೇವೆ. ಜಿಲ್ಲೆಯಲ್ಲಿ ಹಲವಾರು ಕಡೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳು ಎಚ್ಚರದಿಂದಿ ಇರಬೇಕು ಎಂದು ಅವರು ಹೇಳಿದರು.

ಸರ್ವೆ ಕೆಲಸ ಮಾಡುವಾಗ ಅಧಿಕಾರಿಗಳು, ಬಹಳಷ್ಟು ಮುತುವರ್ಜಿ ವಹಿಸ ಬೇಕಾಗಿದೆ. ಈ ಬಗ್ಗೆ ಅನೇಕ ಲೋಪಗಳಾ ಗಿವೆ ಹಾಗೂ ಜಾಗೃತೆ ವಹಿಸಬೇಕು ಎಂದು ಡಿವೈಎಸ್ಪಿಹೇಳಿದರು. ವಾರಾಹಿ ಯೋಜನೆಯಲ್ಲಿ ಎಲ್ಲರಿಗೂ ಕುಡಿಯುವ ನೀರು ದೊರೆಯಬೇಕು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ಡಿವೈಎಸ್ಪಿಸೂಚಿಸಿದರು.

ಹೆಬ್ರಿ ತಹಶೀಲ್ಧಾರ್ ಎಸ್.ಎ.ಪ್ರಸಾದ್, ಇಒ ಶಶಿಧರ್ ಕೆ.ಜೆ., ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಿದ್ದೇಶ್ವರ್, ಶ್ರೀನಿವಾಸ್ ಬಿ.ವಿ., ಗೋವಿಂದ ನಾಯ್ಕ್, ಸುರೇಂದ್ರನಾಥ್, ದಿವಾಕರ ಮರಕಾಲ, ತ್ರಿನೇಶ್ವರ, ಎಸ್ಸೈ ಮಹಾಂತೇಶ್ ಜಾಬಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News