ಸಾವಯವ ಕೃಷಿ ಇಂದಿನ ಅಗತ್ಯ: ಬಂಟಕಲ್ಲು ರಾಮಕೃಷ್ಣ ಶರ್ಮಾ

ಶಿರ್ವ, ಮಾ.23: ಕೃಷಿಯಲ್ಲಿ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಬಳಸದೆ ಸಾವಯವ ಕ್ರಮದಲ್ಲಿ ಕೃಷಿ ಮಾಡಬೇಕು. ದೇಶೀಯ ದನಗಳ ಸಾಕಣೆ, ಗೊಬ್ಬರದ ರಕ್ಷಣೆ, ಬೀಜಗಳ ಆಯ್ಕೆ, ಸಂರಕ್ಷಣೆ, ನಾಟಿ ಪದ್ಧತಿ, ಬಿತ್ತನೆ, ಯಂತ್ರೋಪಕರಣಗಳ ಬಳಕೆ, ನೈಸರ್ಗಿಕ ಕೀಟನಾಶಕಗಳ ಬಳಕೆ ಇಂದಿನ ಅಗತ್ಯ ವಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘ ಪಾಂಬೂರು ಘಟಕದ ವತಿಯಿಂದ ಪಡುಬೆಳ್ಳೆ ಪಾಂಬೂರು ಕುರ್ಡಾಯಿ ಸ್ಯಾಮ್ಸ್ ಫಾರ್ಮ್‌ನಲ್ಲಿ ಶನಿವಾರ ಆಯೋಜಿಸಲಾದ ವೈಜ್ಞಾನಿಕ ಭತ್ತದ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ಮಾತನಾಡಿ, ನಮ್ಮ ಪರಿಸರದಲ್ಲಿ ಭತ್ತದ ಕೃಷಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆ ಯಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಮನಸ್ಥಿತಿ ಇದೆ. ಕಾಡುಪ್ರಾಣಿಗಳ ಉಪಟಳ ಜಾಸ್ತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಕಡಿಮೆ ಶ್ರಮ ಮತ್ತು ಖರ್ಚಿನಲ್ಲಿ ಲಾಭದಾಯಕ ವಾಗಿ ಮಾಡಲು ಸಾಧ್ಯ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕೃಷಿಕ ಸಂಘದ ಪಾಂಬೂರು ಘಟಕದ ಅಧ್ಯಕ್ಷ ಸ್ಯಾನ್ಸನ್ ನೊರೋನ್ಹಾ ಪಾಂಬೂರು ವಹಿಸಿದ್ದರು. ಸಮಾಜ ಸೇವಕ ಪಾಂಬೂರು ರಿಚಾರ್ಡ್ ದಾಂತಿ, ಶಿರ್ವ ಗ್ರಾಪಂ ಮಾಜಿ ಉಪಾಧ್ಯಕ್ಷೆ ಗ್ರೇಸಿ ಕರ್ಡೊಜಾ, ಲೂಕಾಸ್ ಡಿಸೋಜಾ, ವಿಜಯ್ ಧೀರಜ್, ಲಕ್ಷ್ಮಣ ನಾಯಕ್, ನಿತ್ಯಾನಂದ ನಾಯಕ್ ಪಾಲಮೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿಪರ ಕೃಷಿಕ ಗಂಗಾಧರ ಆಚಾರ್ಯ ದಿಂಡಿಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಮೇಶ್ಚಂದ್ರ ನಾಯಕ್ ಪಂಜಿಮಾರು ಕಾರ್ಯ ಕ್ರಮ ನಿರೂಪಿಸಿ ವಂದಿಸಿದರು.