ಸ್ಪೇಸ್ ಸ್ಟೇಷನ್‌ನಿಂದ ಭೂಮಿಗೆ ಇಳಿದ ಇಬ್ಬರು ವಿಜ್ಞಾನಿಗಳು: ಉಡುಪಿಯಲ್ಲಿ ಸಂಭ್ರಮ

ಉಡುಪಿ, ಮಾ.23: ಸ್ಪೇಸ್ ಸ್ಟೇಷನ್‌ನಲ್ಲಿ ನಿಗದಿಯಾದ ಎಂಟು ದಿನದ ಬದಲು 286 ದಿನ ಬಾಕಿಯಾಗಿ ಹರಸಾಹಸ ಪಟ್ಟು ಭೂಮಿ ಮೇಲೆ ವಾಪಸಾದ ಹಿರಿಯ ವಿಜ್ಞಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಉಡುಪಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಉಡುಪಿ ನೇತ್ರ ಜ್ಯೋತಿ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಸಂಭ್ರಮಾ ಚರಣೆಯನ್ನು ಮಾಡಲಾಯಿತು. ಸಮಾಜ ಸೇವಕ ನಿತ್ಯಾನಂದ ಒಳಕಾಡು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ನೂರಾರು ವಿದ್ಯಾರ್ಥಿನಿಯರು ಸುನಿತಾ ವಿಲಿಯಮ್ಸ್ ಅವರ ಭಾವಚಿತ್ರ ಹಿಡಿದು ಶುಭ ಕೋರಿದರು. ಕಾಲೇಜಿನ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಈ ಸಾಧನೆಯನ್ನು ಸಂಭ್ರಮಿಸಲಾಯಿತು.
ಹಿರಿಯ ಭೌತಶಾಸ್ತ್ರಜ್ಞ ಪ್ರೊ.ಎ.ಪಿ ಭಟ್ ಮಾತನಾಡಿದರು. ಕಾಲೇಜಿನ ಮುಖ್ಯಸ್ಥ ಡಾ.ಕೃಷ್ಣಪ್ರಸಾದ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಡಾ.ಗೌರಿ ಪ್ರಭು, ಸಚಿನ್ ಶೇಟ್, ರಶ್ಮಿ ಕೃಷ್ಣಪ್ರಸಾದ್, ತಾರಾ ಶ್ರೀಧರ್ ಉಪಸ್ಥಿತರಿದ್ದರು. ದಯಾನಂದ್ ಕಾರ್ಯಕ್ರಮ ನಿರ್ವಹಿಸಿದರು.