ಭಾಷಾಂತರಕಾರ ಡಾ.ಎನ್.ಟಿ.ಭಟ್‌ಗೆ ಅಕಲಂಕ ದತ್ತಿ ಪುರಸ್ಕಾರ ಪ್ರದಾನ

ಉಡುಪಿ, ಮಾ.23: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ಡಾ.ಉಪ್ಪಂಗಳ ರಾಮ ಭಟ್ಟ ಮತ್ತು ಶಂಕರಿ ಆರ್.ಭಟ್ಟರ ಅಕಲಂಕ ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ, ಭಾಷಾಂತರಕಾರ ಡಾ.ಎನ್. ತಿರುಮಲೇಶ್ವರ ಭಟ್ಟರಿಗೆ ಅಕಲಂಕ ದತ್ತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಯಕ್ಷಗಾನ ವಿದ್ವಾಂಸ, ಅರ್ಥಧಾರಿ ಡಾ.ಪ್ರಭಾಕರ ಜೋಶಿ ಮಾತನಾಡಿ, ಭಾಷೆ ಇರುವುದು ಭಾವನೆಗಳನ್ನು ಅರ್ಥ ಮಾಡಿ ಕೊಳ್ಳಲು. ಕೆಲವೊಮ್ಮೆ ಭಾವನೆಯನ್ನು ಸ್ಪುಟಗೊಳಿಸಿ ಸಂವಹನ ಮಾಡಿಕೊಳ್ಳಲು ಭಾಷೆ ಅಡ್ಡ ಬರುತ್ತದೆ. ಆಗ ಭಾಷಾಂತರಿಗಳ ಅಗತ್ಯ ಬಹಳ ಮಹತ್ವದ್ದಾಗಿ ರುತ್ತದೆ. ಇಂದು ಪುಸ್ತಕಗಳ ಸಂಖ್ಯೆ ಹೆಚ್ಚಾಗಿ, ಓದುಗರ ಸಂಖ್ಯೆ ಕಡಿಮೆ ಆಗಿದೆ. ಪತ್ರಿಕೆಗಳಲ್ಲಿ ಕಾವ್ಯ, ಸಾಹಿತ್ಯ, ವಿಮರ್ಶೆಗಳಿಗೆ ಮಹತ್ವ ಇಲ್ಲದಂತಾಗಿದೆ ಎಂದು ತಿಳಿಸಿದರು.
ಸಂಶೋಧಕ ಹಂ.ಪ.ನಾಗರಾಜಯ್ಯ ಮಾತನಾಡಿ, ಕನ್ನಡ ಸಾಹಿತ್ಯವನ್ನು ಜಗತ್ತಿನ ಇತರ ಭಾಷೆಗಳಿಗೆ ಭಾಷಾಂತರ ಮಾಡಿ ವಿಸ್ತರಿಸುವಲ್ಲಿ ನಾವು ಸೋತಿದ್ದೇವೆ. ಆ ವಿಚಾರದಲ್ಲಿ ತಮಿಳರು ತುಂಬಾ ಮುಂದೆ ಇದ್ದಾರೆ. ಆದುದರಿಂದ ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಭಾಷಾಂತರ ಮಾಡಿ ಇನ್ನಷ್ಟು ವಿಸ್ತಾರಗೊ ಳಿಸಬೇಕು. ಆ ನಿಟ್ಟಿನಲ್ಲಿ ಎನ್.ಟಿ.ಭಟ್ ಅವರು ‘ಪಂಪ ಭಾರತ’ ದಂತೆ ‘ಆದಿ ಪುರಾಣ’ವನ್ನು ಕೂಡ ಆಂಗ್ಲ ಭಾಷೆಗೆ ಅನುವಾದ ಮಾಡುವ ಪ್ರಯತ್ನ ಆಗಬೇಕು ಎಂದರು.
ಕಾರ್ಯಕ್ರಮವನ್ನು ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ್ ಉದ್ಘಾಟಿಸಿ ದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ದತ್ತಿ ದಾನಿಗಳಾದ ಶಂಕರಿ ಆರ್ ಭಟ್, ರಾಜೇಶ್ ಯು. ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಸಹ ಕಾರ್ಯದರ್ಶಿ ಡಾ.ರಘು ನಾಯ್ಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.