ಮಾನವತಾವಾದಿ ಅಂಬೇಡ್ಕರ್ ಪರಿಶಿಷ್ಟ ಜಾತಿಗೆ ಮಾತ್ರ ಸೀಮಿತ ಅಲ್ಲ: ರಮೇಶ್ ಕುಮಾರ್

Update: 2025-03-23 20:30 IST
ಮಾನವತಾವಾದಿ ಅಂಬೇಡ್ಕರ್ ಪರಿಶಿಷ್ಟ ಜಾತಿಗೆ ಮಾತ್ರ ಸೀಮಿತ ಅಲ್ಲ: ರಮೇಶ್ ಕುಮಾರ್
  • whatsapp icon

ಉಡುಪಿ, ಮಾ.23: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರನ್ನು ಕೇವಲ ಪರಿಶಿಷ್ಟ ಜಾತಿಗೆ ಸೀಮಿತಗೊಳಿಸುವುದು ತಪ್ಪು. ಅವರೊಬ್ಬ ಮಹಾನ್ ಮಾನವತಾವಾದಿ ಎಂಬುದಾಗಿ ನಾವೆಲ್ಲ ಸ್ವೀಕರಿ ಸಬೇಕು ಎಂದು ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ವಿವಿಧ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್‌ನ ಸಹಯೋಗದೊಂದಿಗೆ ‘ಜೈ ಬಾಪು ಜೈ ಭೀಮ್ ಜೈ ಸಂವಿಧಾನ’ ಅಭಿಯಾನದ ಪ್ರಯುಕ್ತ ಉಡುಪಿ ಮಿಷನ್ ಕಂಪೌಂಡ್‌ನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರವಿವಾರ ಆಯೋಜಿಸ ಲಾದ ‘ಗಾಂಧಿ ಭಾರತ’ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಈಗ ದೇಶಕ್ಕೆ ನೆಗಡಿ ಹಿಡಿದಿದೆ. ಅದಕ್ಕೆ ಮೂಗು ಸುಧಾರಿಸುವವರೆಗೆ ಶುದ್ಧವಾಗಿ ಇಟ್ಟುಕೊಳ್ಳಬೇಕು. ನೆಗಡಿಯಾಗಿದೆ ಎಂದು ಮೂಗನ್ನೇ ಕಿತ್ತು ಹಾಕಲು ಹೋಗಬಾರದು. ಮೀಸಲಾತಿಯೇ ಇಲ್ಲದ ಕಾಲದಲ್ಲಿ ಸಂವಿಧಾನ ರಚಿಸಲು ಅಂಬೇಡ್ಕರ್‌ರನ್ನು ಆಯ್ಕೆ ಮಾಡಲಾಯಿತು. ಯಾಕೆಂದರೆ ಅವರು ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಕಾನೂನು ಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದರು. ಸಂವಿಧಾನದಿಂದಾಗಿ ಈ ದೇಶದಲ್ಲಿ ಹೋರಾಟ ಮಾಡದವರಿಗೂ ಸ್ವಾತಂತ್ರ್ಯ ದೊರೆತಿದೆ ಎಂದರು.

ಅಂಬೇಡ್ಕರ್ ಸಂವಿಧಾನ ರಚಿಸುವ ಮುನ್ನ ಈ ದೇಶವು ಮನಸ್ಮೃತಿ ಆಧಾರದಲ್ಲಿ ನಡೆಯುತ್ತಿತ್ತು. ಈ ದೇಶವನ್ನು ಸಂವಿಧಾನದ ಮೂಲಕ ಸುಧಾರಿಸಲು ಸಾಧ್ಯವಿಲ್ಲ ಎಂದು ಗೋಲ್ ವಾಲ್ಕರ್ ಬರೆದಿದ್ದರು. ಅದಕ್ಕೆ ಅವರು ಸಂವಿಧಾನ ಬದಲಾಯಿಸಬೇಕು ಎಂದು ಹೇಳಿದ್ದರು. ಅಂಬೇಡ್ಕರ್ ಅವರ ಬಾಲ್ಯ, ಅಂಬೇಡ್ಕರ್ ತಂದೆ ತಾಯಿಗೆ ಆದ ಅನುಭವ ಅವರಿಗೆ ಆಗಿರಲಿಲ್ಲ. ಜಾತಿಯ ಕಾರಣಕ್ಕೆ ನೋವು ಅನುಭವಿಸಿದ ಅಂಬೇಡ್ಕರ್ ಸಂವಿಧಾನ ರಚಿಸುತ್ತಾರೆ ಎಂದು ಅವರು ತಿಳಿಸಿದರು.

ಸಂವಿಧಾನ ಕರಡು ಸಮಿತಿಯ ಸಂಪೂರ್ಣ ಕೆಲಸವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದರು. ಅಂಬೇಡ್ಕರ್ ಹಿಂದುವಾಗಿ ಹುಟ್ಟಿದರು ಆದರೆ ಹಿಂದುವಾಗಿ ಸಾಯಲು ಬಯಸಿರಲಿಲ್ಲ. ಪರಿಶಿಷ್ಟ ಜಾತಿಯ ತಮ್ಮ ಸಮುದಾಯದವರಿಗೆ ಪ್ರತ್ಯೇಕ ಮತದಾನದ ಹಕ್ಕು ಅಂಬೇಡ್ಕರ್ ಕೇಳಿದ್ದರು. ಆದರೆ ಗಾಂಧೀಜಿ ಇದಕ್ಕೆ ವಿರೋಧ ಸೂಚಿಸಿದ್ದರು. ದೇಶದ ಸ್ವಾತಂತ್ರ್ಯದ ಜೊತೆ ತನ್ನ ಜನರ ಸುಧಾರಣೆ ಅಂಬೇಡ್ಕರ್‌ಗೆ ಆದ್ಯತೆಯಾಗಿತ್ತು. ಗಾಂಧೀಜಿ ಮತ್ತು ಅಂಬೇಡ್ಕರ್ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದರೂ ಶತ್ರುಗಳಾಗಿರಲಿಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಸಂವಿಧಾನವನ್ನು ಬದಲಾಯಿಸುವ ಹುನ್ನಾರ ಆಡಳಿತ ರೂಢ ಕೇಂದ್ರ ಸರಕಾರ ನಡೆಸುತ್ತಿದೆ. ಬಿಜೆಪಿ ಸಂವಿಧಾನ ವಿರೋಧಿಯಲ್ಲಿ ನಡೆದು ಕೊಳ್ಳುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತೀ ಅಗತ್ಯ. ಅದೇ ರೀತಿ ಮೀಸಲಾತಿಯನ್ನು ತೆಗೆದು ಹಾಕುವ ಪ್ರಯತ್ನದಲ್ಲೂ ಬಿಜೆಪಿ ಇದೆ ಎಂದು ಆರೋಪಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸ್ವೀಕರ್ ಪೀಠಕ್ಕೆ ಅಗೌರವ ತೋರಿಸಿದ್ದಾರೆ. ಅದು ಅವರ ತಪ್ಪಲ್ಲ. ಅವರನ್ನು ಆರಿಸಿ ಕಳುಹಿಸಿ ರುವ ಜನರ ತಪ್ಪು. ಚುನಾವಣೆ ಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಜನ ಸಾಕಷ್ಟು ಪ್ರಜ್ಞಾ ಪೂರ್ವಕ ವಾಗಿ ಇರಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಲಾವಣ್ಯ ಬಲ್ಲಾಳ್, ಕಿಶನ್ ಹೆಗ್ಡೆ ಕೊಳ್ಕೆ ಬೈಲು, ಮುನಿಯಾಲು ಉದಯ ಶೆಟ್ಟಿ, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ, ಫಾ.ವಿಲಿಯಂ ಮಾರ್ಟಿಸ್, ದಿನಕರ ಹೇರೂರು, ದಿನೇಶ್ ಮೊಳಹಳ್ಳಿ, ವರೋನಿಕಾ ಕರ್ನೆಲಿಯೋ, ಗೀತಾ ವಾಗ್ಳೆ, ಹಬೀಬ್ ಅಲಿ, ಹರೀಶ್ ಕಿಣಿ, ಕೃಷ್ಣ ಶೆಟ್ಟಿ ಮಮತಾ ಶೆಟ್ಟಿ ಉಪಸ್ಥಿತರಿದ್ದರು.

ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಉಡುಪಿ ಕೆ.ಎಂ.ಮಾರ್ಗದಲ್ಲಿರುವ ನಿತ್ಯಾನಂದ ಮಂದಿರದಿಂದ ಕಾರ್ಯಕ್ರಮ ನಡೆಯುವ ಮೈದಾನದವರೆಗೆ ಮೆರವಣಿಗೆ ನಡೆಯಿತು.



 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News