ಕಾಡಲ್ಲಿ ಸಿಕ್ಕಿದ್ದ ಚಿನ್ನಾಭರಣ ಸ್ವಂತಕ್ಕೆ ಬಳಕೆ ಪ್ರಕರಣ: ಸನ್ನಡತೆಗಾಗಿ ಆರೋಪಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿದ ಕೋರ್ಟ್

Update: 2025-03-23 21:21 IST
ಕಾಡಲ್ಲಿ ಸಿಕ್ಕಿದ್ದ ಚಿನ್ನಾಭರಣ ಸ್ವಂತಕ್ಕೆ ಬಳಕೆ ಪ್ರಕರಣ: ಸನ್ನಡತೆಗಾಗಿ ಆರೋಪಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿದ ಕೋರ್ಟ್
  • whatsapp icon

ಕುಂದಾಪುರ, ಮಾ.23: ಸರಕಾರಿ ಹಾಡಿಯಲ್ಲಿ ಮಣ್ಣಿನ ಮಡಿಕೆಯೊಂದರಲ್ಲಿ ಸಿಕ್ಕ ಹಳೆಯ ಕಾಲದ ಚಿನ್ನಾಭರಣಗಳನ್ನು ತನ್ನ ಸ್ವಂತಕ್ಕೆ ಬಳಸಿದ ಸಾಧು ಪೂಜಾರ್ತಿ(45) ಎಂಬವರ ವಿರುದ್ಧದ ಆರೋಪ ಸಾಬೀತಾಗಿದ್ದು, ಆಕೆಯನ್ನು ದೋಷಿ ಎಂಬುದಾಗಿ ಕುಂದಾಪುರದ 2ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಕಳೆದ 13 ವರ್ಷಗಳಿಂದ ಈ ಪ್ರಕರಣದಲ್ಲಿ ಆರೋಪಿತೆ ತೋರಿದ ಸನ್ನಡತೆ ಆಧಾರದಲ್ಲಿ ಅವರಿಗೆ ನ್ಯಾಯಾಧೀಶರು ಕಾರಾಗೃಹ ವಾಸದ ಶಿಕ್ಷೆಯಿಂದ ವಿನಾಯಿತಿ ನೀಡಿದ್ದಾರೆ.

ಅಮಾಸೆಬೈಲು ಠಾಣಾ ವ್ಯಾಪ್ತಿಯ ಮಚ್ಚಟ್ಟು ಎಂಬಲ್ಲಿನ ಸರಕಾರಿ ಹಾಡಿಯಲ್ಲಿ ದರಲೆ ಗುಡಿಸುವಾಗ 2012ರ ಡಿ.15 ರಂದು ಸಾಧು ಪೂಜಾರ್ತಿ ಅವರಿಗೆ ಮಣ್ಣಿನ ಮಡಿಕೆಯಲ್ಲಿ 16-17ನೇ ಶತಮಾನದ ಕೃಷ್ಣ ದೇವರಾಯ ಕಾಲದ ಚಿನ್ನಾಭರಣ ಸಿಕ್ಕಿತ್ತು. ಈಗಿನ ಮೌಲ್ಯದ ಪ್ರಕಾರ 50-60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದಾಗಿತ್ತು ಎಂದು ಅಂದಾಜಿಸಲಾಗಿದೆ. ಇದನ್ನು ಆರೋಪಿ ಸರಕಾರ ಅಥವಾ ಪೊಲೀಸರ ಗಮನಕ್ಕೆ ತಾರದೇ, ತನ್ನ ಸ್ವಂತಕ್ಕೆ ಬಳಸಿದ ಆರೋಪ ಎದುರಿಸುತ್ತಿದ್ದರು.

ಈ ಚಿನ್ನಾಭರಣ ಸಿಕ್ಕ ವೇಳೆ ಇವರೊಂದಿಗೆ ಇದ್ದ ವ್ಯಕ್ತಿ ಪಾಲು ಕೇಳಿದ್ದು, ಇವರು ಕೊಡಲು ಒಪ್ಪದಾಗ ಆ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದರು. ಅಂದಿನ ಡಿವೈಎಸ್‌ಪಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ಸಾಧು ಪೂಜಾರ್ತಿ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಎಸ್ಸೈ ನಾಸೀರ್ ಹುಸೇನ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಸಾಧು ಪೂಜಾರ್ತಿ ತಪ್ಪಿತಸ್ಥಳೆಂದು ತೀರ್ಮಾನಿಸಿ, ಅವರ ಬಳಿಯಿದ್ದ ಹಳೆಯ ಕಾಲದ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ. ಈ ಪ್ರಕರಣದಲ್ಲಿ ಗರಿಷ್ಠ 2 ವರ್ಷದವರೆಗೆ ಶಿಕ್ಷೆ ನೀಡಲು ಅವಕಾಶವಿದ್ದರೂ, ಕಳೆದ 13 ವರ್ಷದಲ್ಲಿ ಅವರು ವಿಚಾರಣೆಗೆ ತಪ್ಪದೇ ಹಾಜರಾಗುತ್ತಿದ್ದು, ಈ ವೇಳೆ ತೋರಿದ ಸನ್ನಡತೆಯನ್ನು ಪರಿಗಣಿಸಿ ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ 1958ರ ಕಲಂ 3 ರಂತೆ ನ್ಯಾಯಾಧೀಶೆ ರೋಹಿಣಿ ಡಿ., ಸಾಧು ಪೂಜಾರ್ತಿ ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ ಆದೇಶ ನೀಡಿದ್ದಾರೆ.

ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News