ಅಧ್ಯಯನ ಪೀಠಗಳು ಕೇವಲ ವಿವಿ ಆವರಣಕ್ಕೆ ಸೀಮಿತವಾಗದಿರಲಿ: ಜಯಪ್ರಕಾಶ್ ಹೆಗ್ಡೆ

Update: 2025-04-04 20:28 IST
ಅಧ್ಯಯನ ಪೀಠಗಳು ಕೇವಲ ವಿವಿ ಆವರಣಕ್ಕೆ ಸೀಮಿತವಾಗದಿರಲಿ: ಜಯಪ್ರಕಾಶ್ ಹೆಗ್ಡೆ
  • whatsapp icon

ಕುಂದಾಪುರ, ಎ.4: ಜಿಲ್ಲೆಯ ಅರ್ಧ ಭಾಗಕ್ಕಿಂತ ಹೆಚ್ಚು ಭಾಗದ ಜನರು ಮಾತನಾಡುವ ಕುಂದಾಪ್ರ ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದೆ. ಈ ಭಾಷೆಗೆ ಸೊಗಡು-ಸಂಸ್ಕೃತಿಯಿದೆ. ನಮ್ಮ ಅಬ್ಬಿ (ತಾಯಿ) ಭಾಷಿಯ ಹಿರಿತನ ಹಾಗೂ ಪರಂಪರೆಯನ್ನು ಉಳಿಸಿ-ಬೆಳೆಸುವ ಕೆಲಸ, ಕುಂದಾಪ್ರ ಕನ್ನಡ ಮಾತನಾಡುವ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಮಂಗಳೂರು ವಿವಿಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಮಂಗಳೂರು ವಿವಿಯ ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಆಯ್ದ ಸಂಘಟನೆಗಳ ಪ್ರತಿನಿಧಿಗಳ ಕುಂದಾಪ್ರ ಭಾಷಿಕರೊಂದಿಗೆ ಕುಂದಾಪುರ ಹೋಟೇಲ್ ಯುವ ಮನೀಶ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಭಾಷಾ ಅಧ್ಯಯನ ಜೊತೆಯಲ್ಲಿ ಸಂಸ್ಕೃತಿ ಹಾಗೂ ಪರಂಪರೆಯ ಅಧ್ಯಯನಗಳು ನಡೆಯಬೇಕು. ಅಧ್ಯಯನ ಪೀಠಗಳು ಕೇವಲ ವಿಶ್ವ ವಿದ್ಯಾಲಯದ ಆವರಣಕ್ಕೆ ಸೀಮಿತವಾಗದೆ, ಭಾಷೆಯನ್ನು ಮಾತನಾ ಡುವ ಭಾಷಿಕರೊಂದಿಗೆ ಮುಕ್ತವಾಗಿ ಅಭಿಪ್ರಾಯ ವಿನಿಮಯ ಮಾಡಿಕೊಂಡಾಗ ಮಾತ್ರ ಸರಕಾರಗಳ ಪೀಠ ಸ್ಥಾಪನೆಯ ಉದ್ದೇಶಗಳು ಸಾರ್ಥಕವಾಗುತ್ತದೆ. ಭಾಷಾ ಬೆಳವಣಿಗೆಯ ಮೂಲಕ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯೂ ಬೆಳೆಯುತ್ತದೆ ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ರಾಜು ಮೊಗವೀರ ಮಾತನಾಡಿ, ವಿಶ್ವ ವಿದ್ಯಾಲಯದಲ್ಲಿ ಇರುವ 24 ಪೀಠಗಳಿಗಿಂತಲೂ, ಕುಂದಾಪ್ರ ಕನ್ನಡ ಅಧ್ಯಯನ ಪೀಠ ವಿಭಿನ್ನ ಚಿಂತನೆಗಳೊಂದಿಗೆ ಕೆಲಸ ಮಾಡುತ್ತಿದೆ. ಪಾರಂಪರಿಕ ಸಾಹಿತ್ಯಗಳು, ಪದಗಳು, ಹಾಡುಗಳು, ಆಟಗಳು, ಸಾಂಸ್ಕೃತಿಕ ಚಟುವಟಿಕೆ ಗಳು, ಪರಿಕರಗಳು, ಬಳಕೆಯ ಭಾಷೆಗಳು ಎಲ್ಲವೂ ಮುಂದಿನ ಪೀಳಿಗೆಗೆ ಉಳಿಸುವ ಕೆಲಸಗಳು ನಡೆಯ ಬೇಕು. ಅನ್ಯ ಭಾಷೆಗಳ ಪ್ರಭಾವಗಳಿಂದ, ನಮ್ಮ ಭಾಷೆಯಲ್ಲಿನ ಹಿಂದಿನ ಬಳಕೆಯ ಪದಗಳ ಬದಲಾವಣೆ ಯಿಂದ ಶ್ರೇಷ್ಠ ಸಂಸ್ಕೃತಿಗಳು ಬದಲಾಗುವ ಅಪಾಯಗಳಿವೆ ಎಂದು ತಿಳಿಸಿದರು.

ಹಿರಿಯ ವ್ಯಂಗ್ಯ ಚಿತ್ರಕಾರ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯ ಪಂಜು ಗಂಗೊಳ್ಳಿ ಮಾತನಾಡಿ, ಕುಂದಗನ್ನಡ ಇತ್ತೀಚಿನ ವರ್ಷಗಳಲ್ಲಿ ಬಳಕೆಗೆ ಬಂದ ಪರಿವರ್ತಿತ ಶಬ್ದ. ಈ ಶಬ್ದದ ಉಚ್ಛಾರಣೆಯಲ್ಲಿ ಕುಂದನಗರಿಯಾದ ಬೆಳಗಾವಿಯ ಸಾಮೀಪ್ಯ ಕಾಣಿಸುತ್ತದೆ. ಕುಂದಾಪ್ರ ಕನ್ನಡ ಈ ಭಾಗದ ಅತ್ಯಂತ ಜನಜನಿತವಾದ ಪದಗಳಾಗಿರುವುದರಿಂದ ಅಧ್ಯಯನ ಪೀಠವನ್ನು ’ಕುಂದಾಪ್ರ ಕನ್ನಡ ಅಧ್ಯಯನ ಪೀಠ ’ ಎಂದು ಕರೆಯುವುದೇ ಸೂಕ್ತ ಎಂದರು.

ಹಿರಿಯ ನ್ಯಾಯವಾದಿ ಟಿ.ಬಿ.ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ ಕ್ರಾಸ್ಟೋ, ಖಾರ್ವಿ ಸಮಾಜದ ಪ್ರಮುಖರಾದ ಜಯಾನಂದ ಖಾರ್ವಿ, ಕಲಾಕ್ಷೇತ್ರ ಸಂಘಟನೆಯ ರಾಜೇಶ್ ಕಾವೇರಿ, ಬೀಜಾಡಿ ಮಿತ್ರ ವೃಂದದ ಚಂದ್ರಶೇಖರ ಬೀಜಾಡಿ ಮಾತನಾಡಿದರು.

ಪತ್ರಕರ್ತ ಸೋಮಶೇಖರ ಪಡುಕೆರೆ, ಬಾರ್ಕೂರು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಉಮೇಶ್ ಪುತ್ರನ್, ರಾಜ್ಯ ಪಂಚಾಯತ್‌ರಾಜ್ ತಜ್ಞ ಟಿ.ಬಿ.ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ವಿಕಾಸ್ ಹೆಗ್ಡೆ, ಬೈಂದೂರು ತಾಲ್ಲೂಕು ಭಾರತ್ ಸೇವಾ ದಳ ಸಂಘಟನೆಯ ಅಧ್ಯಕ್ಷ ಶರತ್ಕುಮಾರ ಶೆಟ್ಟಿ ಉಪ್ಪುಂದ, ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಚೇತನ್ ಶೆಟ್ಟಿ ಕೋವಾಡಿ, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯೆ ಡಾ.ರೇಖಾ ಬನ್ನಾಡಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಹಟ್ಟಿಯಂಗಡಿ ಯಕ್ಷಗಾನ ಮೇಳದ ಯಜಮಾನರಾದ ವಕ್ವಾಡಿ ರಂಜಿತ್ ಕುಮಾರ ಶೆಟ್ಟಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸದಾನಂದ ಬೈಂದೂರು, ತೆಕ್ಕಟ್ಟೆ ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಕಲಾಚಿಗುರು ಸಂಸ್ಥೆಯ ಚೇತನ್ ನೈಲಾಡಿ ಅಭಿಪ್ರಾಯ ಮಂಡಿಸಿದರು.

ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸ್, ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸಂಯೋಜಕ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು. ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸಲಹಾ ಸಮಿತಿಯ ಸದಸ್ಯರಾದ ರಾಜೇಶ್ ಕೆ.ಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉದಯ ಕುಮಾರ್ ಶೆಟ್ಟಿ ಪಡುಕೆರೆ ಸ್ವಾಗತಿಸಿದರು, ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹಾಗೂ ರಾಜೇಶ್ ಹೆಮ್ಮಾಡಿ ಸಂಘಟಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News