ಉಡುಪಿಯ ಜಿನ ಮೆರಿಲ್ ಅಪಹರಣ ಪ್ರಕರಣ| ಹೇಬಿಯಸ್ ಕಾರ್ಪಸ್; ಯುವಜೋಡಿ ಹೈಕೋರ್ಟ್‌ಗೆ ಹಾಜರು

Update: 2025-04-04 21:48 IST
ಉಡುಪಿಯ ಜಿನ ಮೆರಿಲ್ ಅಪಹರಣ ಪ್ರಕರಣ| ಹೇಬಿಯಸ್ ಕಾರ್ಪಸ್; ಯುವಜೋಡಿ ಹೈಕೋರ್ಟ್‌ಗೆ ಹಾಜರು
  • whatsapp icon

ಉಡುಪಿ, ಎ.4: ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯ ಹಿನ್ನೆಲೆಯಲ್ಲಿ ಕೊಡವೂರು ಗ್ರಾಮದ ಉದ್ದಿನಹಿತ್ಲು ಗೋಡ್ವಿನ್ ದೇವದಾಸ್ ಎಂಬವರ ಮಗಳು ಜಿನ ಮೆರಿಲ್(19) ಹಾಗೂ ಆಕೆಯ ಪ್ರಿಯಕರ ಮುಹಮ್ಮದ್ ಅಕ್ರಮ್ ಇಂದು ಹೈಕೋರ್ಟ್ ಮುಂದೆ ಹಾಜರಾಗಿದ್ದಾರೆ.

ತನ್ನ ಮಗಳು ಜಿನ ಮೆರಿಲ್‌ಳನ್ನು ಮುಹಮ್ಮದ್ ಅಕ್ರಮ್ ಅಪರಹರಿಸಿ ರುವುದಾಗಿ ಗೋಡ್ವಿನ್ ದೇವದಾಸ್ ನೀಡಿದ ದೂರಿಗೆ ಸಂಬಂಧಿಸಿದಂತೆ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾ.28ರಂದು ಯುವತಿಯ ಪೋಷಕರು ಹೈಕೋರ್ಟ್‌ನಲ್ಲಿ ತಮ್ಮ ಮಗಳ ಕುರಿತು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಹಾಜರಿದ್ದ ಅಕ್ರಮ್ ಹಾಗೂ ಜಿನ ಪರ ವಕೀಲರು, ಜಿನ ಮೆರಿಲ್‌ಳನ್ನು ಎ.4ರಂದು ಹೈಕೋರ್ಟ್ ಮುಂದೆ ಹಾಜರುಪಡಿಸುವುದಾಗಿ ತಿಳಿಸಿದ್ದರು.

ಅದರಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ಹಾಗೂ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರ ದ್ವಿಸದಸ್ಯ ಪೀಠದ ಮುಂದೆ ಜಿನ ಮೆರಿಲ್ ಹಾಗೂ ಮುಹಮ್ಮದ್ ಅಕ್ರಮ್ ಇಂದು ತಮ್ಮ ವಕೀಲರ ಮೂಲಕ ಹಾಜರಾದರು. ನ್ಯಾಯಾಲಯದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳ ಮುಂದೆ ತನ್ನನ್ನು ಯಾರೂ ಕೂಡ ಅಪಹರಿಸಿರುವುದಿಲ್ಲ, ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ಆಕೆ ತಿಳಿಸಿದ್ದಾಳೆ.

ಯುವತಿಯ ತಾಯಿ, ನನ್ನ ಮಗಳ ಜೊತೆ ಮಾತನಾಡಬೇಕು ಎಂದು ತಿಳಿಸಿದಾಗ, ನ್ಯಾಯಮೂರ್ತಿ ಸ್ವತಹ ತಮ್ಮ ಕೊಠಡಿಯಲ್ಲಿ ಆಕೆಯ ಜೊತೆ ತಾಯಿಯನ್ನು ಮಾತನಾಡಿಸಿದ್ದಾರೆ. ನಂತರ ವಿಚಾರಣೆ ಯಲ್ಲಿ ತಾಯಿ, ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಮೂರ್ತಿ ಅವರಲ್ಲಿ ಕೇಳಿಕೊಂಡರು. ಆದರೆ ಇದಕ್ಕೆ ಯುವತಿ ಒಪ್ಪಲಿಲ್ಲ ಎಂದು ಮೂಲಗಳು ತಿಳಿಸಿವೆ.

ಅಲ್ಲದೇ ತಾನು ಅಕ್ರಮ್ ಜೊತೆ ಎ.19ರಂದು ರಿಜಿಸ್ಟಾರ್ ಮದುವೆ ಮಾಡಿಕೊಳ್ಳುತ್ತಿದ್ದು, ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿ ಆಕೆ ಪೀಠದ ಮುಂದೆ ತಿಳಿಸಿದ್ದಾಳೆ. ಅಲ್ಲದೆ ತಾಯಿ ಯೊಂದಿಗೆ ಕೂಡ ಉತ್ತಮ ಬಾಂಧವ್ಯದೊಂದಿಗೆ ಇರುವುದಾಗಿ ಆಕೆ ನ್ಯಾಯಮೂರ್ತಿಗಳ ಮುಂದೆ ತಿಳಿಸಿದ್ದಾಳೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಎ.22ರಂದು ನಿಗದಿಪಡಿಸಿದ್ದು, ಅಂದು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಪೀಠ ನಿರ್ದೇಶಿಸಿದೆ. ಈ ಸಂದರ್ಭದಲ್ಲಿ ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News