ಕಾರ್ಕಳ| ಪತ್ರಕರ್ತನ ಸೋಗಿನಲ್ಲಿ ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ ಆರೋಪ: ಪ್ರಕರಣ ದಾಖಲು

Update: 2025-04-04 22:49 IST
ಕಾರ್ಕಳ| ಪತ್ರಕರ್ತನ ಸೋಗಿನಲ್ಲಿ ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ ಆರೋಪ: ಪ್ರಕರಣ ದಾಖಲು
  • whatsapp icon

ಕಾರ್ಕಳ: ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದ ವ್ಯಕ್ತಿಯೋರ್ವರಿಗೆ ಪತ್ರಕರ್ತನ ಸೋಗಿನಲ್ಲಿ ಪರಿಸರದಲ್ಲಿ ತಿರುಗಾಡಿಕೊಳ್ಳುತ್ತಿದ್ದ ವ್ಯಕ್ತಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾನೆ ಎನ್ನಲಾದ ಘಟನೆ ತೆಳ್ಳಾರಿನ ಮೇಲಿನ ಕುಕ್ಕಾಜೆ ರಸ್ತೆಯಲ್ಲಿ ಗುರುವಾರ ನಡೆದಿದೆ.

ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ತೆಳ್ಳಾರು ಕುಕ್ಕಾಜೆ ಎಂಬಲ್ಲಿ ಝಹೀರ್ ಎಂಬವರ ಮನೆಯಲ್ಲಿ ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ನಡೆಯುತ್ತಿತ್ತು ಎನ್ನಲಾಗಿದ್ದು, ವಿಶ್ವನಾಥ್ ಎಂಬವರು ತಮ್ಮ ಕುಟುಂಬದ ಸಮಸ್ಯೆ ಪರಿಹರಿಸಲು ಝಹೀರ್ ಮನೆಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಪೂಜೆ ಮುಗಿಸಿ ವಿಶ್ವನಾಥ್ ಸ್ಕೂಟರ್ ನಲ್ಲಿ ವಾಪಾಸು ಮನೆಗೆ ತೆರಳುತ್ತಿದ್ದ ಸಂದರ್ಭ ಆರೋಪಿ ರಿಯಾಝ್‌ ಎಂಬಾತ ವಿಶ್ವನಾಥ್‌ರ ಸ್ಕೂಟರನ್ನು ತಡೆದು ನಿಲ್ಲಿಸಿ ಬೈದು, ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದ್ದು, ಅಲ್ಲದೆ ರಿಯಾಝ್ ನ ಮಕ್ಕಳಾದ ರಿಯಾನ್ ಮತ್ತು ರಿಪ್ಪಾನ್ ಹಾಗೂ ರಿಮಾನ್ ಎಂಬವರು ವಿಶ್ವನಾಥ್ ರಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಹಲ್ಲೆಯಿಂದ ಗಾಯಗೊಂಡ ವಿಶ್ವನಾಥ್ ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ  ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಾಝ್ ತೆಳ್ಳಾರು ಪರಿಸರದಲ್ಲಿ ತಾನೊಬ್ಬ ಪತ್ರಕರ್ತನೆಂದು ಓಡಾಡಿಕೊಂಡು ‌ತನ್ನ ವಾಹನಗಳಲ್ಲಿ ಅಸ್ತ್ರ ಮಿಡೀಯಾ ಎಂದು ಬೋರ್ಡ್ ಅಳವಡಿಸಿದ್ದಾನೆ ಎಂದು ತಿಳಿದುಬಂದಿದೆ. ಈತನ ವಿರುದ್ಧ ಕಾರ್ಕಳ ಪತ್ರಕರ್ತರ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ಕಾರ್ಕಳ ನಗರ ಠಾಣಾ ಪೋಲಿಸರು ಈತನನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News