ಪ್ರವಾಸಿ ತಾಣಗಳ ಅಭಿವೃದ್ಧಿಗೆ ವೋಟ್ ಮಾಡಲು ಅವಕಾಶ

Update: 2024-09-09 15:11 GMT

ಉಡುಪಿ, ಸೆ.9: ಪ್ರವಾಸೋದ್ಯಮವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಪ್ರವಾಸೋ ದ್ಯಮ ಸಚಿವಾಲಯದಿಂದ ‘ದೇಕೋ ಅಪ್ನಾ ದೇಶ್, ಪೀಪಲ್ಸ್ ಚಾಯ್ಸ್-2024’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.

ಈ ಕಾರ್ಯಕ್ರಮದ ಭಾಗವಾಗಿ ನಾಗರಿಕರು ಹಾಗೂ ಪ್ರವಾಸಿಗರ ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ‘ಮೈ ಗವರ್ನ್’ ವೇದಿಕೆಯಡಿ ಸೆಪ್ಟೆಂಬರ್ 15ರವರೆಗೆ ವೋಟ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ ಇದರಡಿ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಜ್ಯದಲ್ಲಿರುವ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆ ಮಾಡಲು ತಾವು ಈಗಾಗಲೇ ಭೇಟಿ ನೀಡಿರುವ ಕನಿಷ್ಠ ಒಂದು ಆಕರ್ಷಣೆಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ. ಅಲ್ಲದೇ ತಾವು ಭವಿಷ್ಯದಲ್ಲಿ ಭೇಟಿ ನೀಡಲು ಬಯಸುವ ಕನಿಷ್ಠ ಒಂದು ಆಕರ್ಷಣೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವೇಳೆ ಲಿಂಕ್‌ನಲ್ಲಿ ತಮ್ಮ ಮೊಬೈಲ್ ನಂಬರ್, ಹೆಸರು, ವಯಸ್ಸು, ರಾಜ್ಯ ಸೇರಿದಂತೆ ಪ್ರಾಥಮಿಕ ಮಾಹಿತಿಗಳನ್ನು ಪೂರ್ತಿ ಮಾಡಿ ಓಟಿಪಿ ಮೂಲಕ ಲಾಗಿನ್ ಆಗಿ ದೇಶದ ಯಾವುದೇ ಪ್ರವಾಸಿ ಸ್ಥಳದ ಕುರಿತು ವೋಟ್ ಮಾಡಬಹುದು. ದೇಶದ ಹಲವು ಪ್ರವಾಸಿ ತಾಣಗಳಲ್ಲಿ ಉಡುಪಿ ಜಿಲ್ಲೆಯ 15 ಪ್ರವಾಸಿ ತಾಣಗಳನ್ನು ಸಹ ಸೇರಿಸಲಾಗಿದೆ.

ಇದರಿಂದ ಗುರುತಿಸಲಾದ ವಿಜೇತ ಆಕರ್ಷಣೀಯ ತಾಣಗಳನ್ನು ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡುವುದರೊಂದಿಗೆ ಇದು ಭಾರತದ ‘ವಿಕಷಿತ್ ಭಾರತ್-2047’ ಕಡೆಗೆ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ.

ವೋಟಿಂಗ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೇಂದ್ರ ಸರಕಾರದಿಂದ ಅವರ ಹೆಸರಿನಲ್ಲಿ ಇ-ಪ್ರಮಾಣ ಪತ್ರ ದೊರೆಯಲಿದೆ  ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News