ಎಲ್ಸೈಸಿ ದುರ್ಬಲಗೊಳಿಸುವ ಸರಕಾರದ ಪ್ರಯತ್ನಕ್ಕೆ ಸಂಘಟಿತ ಹೋರಾಟದಿಂದ ಪ್ರತಿರೋಧ: ಸತೀಶ್

Update: 2024-08-24 16:14 GMT

ಉಡುಪಿ, ಆ.24: ಎಲ್‌ಐಸಿಯನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರವು ವಿಮಾ ನಿಯಂತ್ರಣ ಪ್ರಾಧಿಕಾರದ ಮೂಲಕ ಕೈಗೊಂಡ ಕೆಲವೊಂದು ದಮನಕಾರಿ ನೀತಿಗಳನ್ನು ವಿಮಾ ನೌಕರರು, ಪಾಲಿಸಿದಾರರು ಮತ್ತು ಜನತೆಯ ಸಂಘಟಿತ ಹೋರಾಟದ ಮೂಲಕ ಹಿಮ್ಮೆಟ್ಟಿಸಲು ಸಾಧ್ಯ ಎಂದು ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಅಧ್ಯಕ್ಷ ಪಿ. ಸತೀಶ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಎಲ್ಲೈಸಿ ಎಂಪ್ಲಾಯೀಸ್ ಕೋಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ವಿಭಾಗದ ವಿಮಾ ನೌಕರರ ಸಂಘದ 66ನೇ ವಿಭಾಗೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜನರ ಸಂಘಟಿತ ಹೋರಾಟದ ಮೂಲಕವಷ್ಟೇ ಸರಕಾರದ ಎಲ್ಲಾ ಜನವಿರೋಧಿ ನೀತಿಗಳನ್ನು ಹತ್ತಿಕ್ಕಲು ಸಾಧ್ಯ ಎಂದ ಅವರು ಕಳೆದ ಸಾರ್ವತ್ರಿಕ ಚುನಾವಣೆಗಳ ನಂತರ ಅಸ್ತಿತ್ವಕ್ಕೆ ಬಂದಿರುವ ಎನ್‌ಡಿಎ ಸಮ್ಮಿಶ್ರ ಸರಕಾರ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿಗಳನ್ನು ವಿವರವಾಗಿ ವಿಶ್ಲೇಷಿಸಿದರು.

ಕಳೆದ ಅಧಿಕಾರಾವಧಿಯಲ್ಲಿ ಎಗ್ಗಿಲ್ಲದಂತೆ ಜನರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನು ದುರುಪಯೋಗಿಸಿಕೊಂಡು ನಿರಂಕುಶ ಪ್ರಭುತ್ವ ನಡೆಸಿದ ಬಿಜೆಪಿ ಸರಕಾರದ ಧೋರಣೆಗಳಿಗೆ ಇಂದು ಬಲವಾದ ಹಿನ್ನಡೆಯಾಗಿದೆ. ಅತಿಯಾದ ಆತ್ಮವಿಶ್ವಾಸ ದೊಂದಿಗೆ ಕಳೆದ ಚುನಾವಣೆಯಲ್ಲಿ ಅತ್ಯಧಿಕ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದುಕೊಂಡಿದ್ದ ಬಿಜೆಪಿಯ ವಿಶ್ವಾಸಾರ್ಹತೆಯು ಗಣನೀಯವಾಗಿ ಕುಂಠಿತಗೊಂಡು ಗ್ರಾಮೀಣ ಭಾಗದಲ್ಲಿ ಶೇ.60ರಷ್ಟು ಮತಗಳ ಹಿನ್ನಡೆಯಾಗಿರುವುದು ಚುನಾವಣೆಯಲ್ಲಿ ಜನತೆಯ ಪ್ರತಿರೋಧದ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದರು.

ಇಂದಿನ ಎನ್‌ಡಿಎ ಸಮ್ಮಿಶ್ರ ಸರಕಾರದಲ್ಲಿ ಬಿಜೆಪಿಯ ಏಕಪಕ್ಷೀಯ ನಿರ್ಣಯಗಳಿಗೆ ತಡೆಯುಂಟಾಗಿದೆ. ಸರಕಾರ ಮಂಡಿ ಸಿದ ವಕ್ಫ್ ಮಸೂದೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಸೂದೆಗಳು ಇನ್ನೂ ಸಂಸತ್ತಿನಲ್ಲಿ ಅನುಮೋದನೆ ಯಾಗದೆ ಉಳಿದಿದೆ. ಸರಕಾರದ ಸಂವಿಧಾನರೋಧಿ ಕಾರ್ಯಸೂಚಿಗಳ ಅನುಷ್ಟಾನಕ್ಕೆ ತಡೆ ಹಾಕಿ ಪ್ರಜಾಸತ್ತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಸಾರ್ವಜನಿಕ ರಂಗದ ಎಲ್ಲೈಸಿ ಬಗ್ಗೆ ಮಾತನಾಡಿದ ಅವರು ವಿಮಾ ಪಾಲಿಸಿಗಳ ಮೇಲೆ ಜಿಎಸ್‌ಟಿ ಏರಿಕೆಯನ್ನು ವಿರೋಧಿಸಿ ಸಂಘಟನೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು. ಜಿಎಸ್‌ಟಿ ಏರಿಕೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ದೇಶದಾದ್ಯಂತ ಮುನ್ನೂರಕ್ಕು ಹೆಚ್ಚು ಸಂಸದರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆ. ವಿಮಾ ಪಾಲಿಸಿಗಳ ಮೇಲೆ ಜಿಎಸ್‌ಟಿ ಹೇರಿಕೆಯ ವಿರುದ್ಧ ಸಂಘಟನೆಯ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷೆ ಎಸ್.ಕೆ.ಗೀತಾ ಮಾತನಾಡಿ, 78ನೆಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ನಾವು ಗಳಿಸಿದ ಸ್ವಾತಂತ್ರ್ಯವನ್ನು ನಮ್ಮವರಿಂದಲೇ ಕಳೆದುಕೊಂಡು ಶೋಷಣೆಗೆ ಒಳಗಾಗುವ ಪರಿಸ್ಥಿತಿ ಇಂದು ಬಂದಿದೆ ಎಂದು ವಿವರಿಸಿದರು.

ರೈತರು, ಕಾರ್ಮಿಕರು ಮತ್ತು ಮಹಿಳೆಯರ ಸುರಕ್ಷೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಯಾವುದೇ ಆಸಕ್ತಿ ತೋರದ ಇಂದಿನ ಕೇಂದ್ರ ಸರಕಾರವು ಖಾಸಗಿ ರಂಗದ ಪರವಾದ ನೀತಿಗಳನ್ನು ಇನ್ನೂ ಮುಂದುವರಿಸಿ ಕೊಂಡು ಹೋಗುತ್ತಿದೆ. ದೇಶದ ವಿದ್ಯಾವಂತ ಅಸಂಘಟಿತ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಪಡುತ್ತಿರುವ ಬವಣೆ ಮತ್ತು ಅವರನ್ನು ನಿರಂತರ ಕಾಡುತ್ತಿರುವ ಉದ್ಯೋಗ ಅನಿಶ್ಚಿತತೆಯ ಭಯದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಸಿಐಟಿಯು ಉಡುಪಿ ಇದರ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ ಸರಕಾರದ ಖಾಸಗಿ ರಂಗದ ಪರ ನೀತಿಗಳ ವಿರುದ್ಧ ಮತ್ತು ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನೀತಿಗಳ ವಿರುದ್ಧ ಸದಾ ಜಾಗೃತರಾಗಿದ್ದು, ಹೋರಾಟ ನಡೆಸಲು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘ ಉಡುಪಿ ವಿಭಾಗದ ಅಧ್ಯಕ್ಷ ಕೆ.ವಿಶ್ವನಾಥ್ ವಹಿಸಿದ್ದರು. ಉಡುಪಿ ವಿಭಾಗ ಎಲ್ಲೈಸಿ ಯ ಮಾರುಕಟ್ಟೆ ಪ್ರಬಂಧಕ ಬಿಜು ಜೋಸೆಫ್ ಶುಭ ಹಾರೈಸಿದರು.

ಸಮಾರಂಭದಲ್ಲಿ ಎಲ್ಲೈಸಿ ಉಡುಪಿ ವಿಭಾಗದ ಕಾರ್ಮಿಕ ಮತ್ತು ಔದ್ಯೋಗಿಕ ಪ್ರಬಂಧಕ ಎಂ. ಲಕ್ಷ್ಮೀನಾರಾಯಣ, ಸಿಐಟಿಯು ಉಡುಪಿ ಕೋಶಾಧಿಕಾರಿ ಶಶಿಧರ ಗೊಲ್ಲ, ವಿಮಾ ಪಿಂಚಣಿದಾರರ ಸಂಘದ ಜೊತೆ ಕಾರ್ಯದರ್ಶಿ ಶ್ರೀಪತಿ ಉಪಾದ್ಯಾಯ, ವಿಮಾ ಅಧಿಕಾರಿಗಳ ಸಂಘದ ಕಾರ್ಯದರ್ಶಿ ನರಸಿಂಹ ಪ್ರಭು, ವಿಮಾ ನೌಕರರ ಸಂಘದ ಮಹಿಳಾ ಉಪಸಮಿತಿ ಸಂಚಾಲಕಿ ನಿರ್ಮಲ ಉಪಸ್ಥಿತರಿದ್ದರು.

ಈ ಸಮ್ಮೇಳನದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಶಾಖಾ ಘಟಕಗಳಿಂದ ಬಂದ ಪ್ರತಿನಿಧಿಗಳು ಮತ್ತು ವೀಕ್ಷಕರನ್ನು ಒಳಗೊಂಡು ಒಟ್ಟು 250 ಮಂದಿ ಸದಸ್ಯರು ಭಾಗವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಪ್ರಾಸ್ತಾವಿಕ ವಾಗಿ ಮಾತನಾಡಿ ವಂದಿಸಿದರೆ, ಡೆರಿಕ್ ಎ ರೆಬೆಲ್ಲೋ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News