ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಟೋಲ್‌ಗೆ ವಿರೋಧ; ಸ್ಥಳ ಪರಿಶೀಲನೆಗೆ ಬಂದ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟ ಸಮಿತಿ
ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರ ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್‌ಗೇಟ್ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ.
ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣದ ಸ್ಥಳ ಪರಿಶೀಲನೆಗಾಗಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಎಕ್ಸಿಕ್ಯೂಟಿವ್ ಇಂಜಿನಿಯರ್ ರಘು ಎಲ್ ಹಾಗೂ ಸಹಾಯಕ ಇಂಜಿನಿಯರ್ ಹೇಮಂತ್ ಕುಮಾರ್ ಆಗಮಿಸಿದ್ದರು. ಅಧಿಕಾರಗಳು ಬರುವ ಸುದ್ದಿ ತಿಳಿದ ಟೋಲ್ ವಿರೋಧಿ ಹೋರಾಟಗಾರರು ಸ್ಥಳದಲ್ಲಿ ಜಮಾಯಿಸಿದ್ದರು.
ಸ್ಥಳಕ್ಕೆ ಬಂದ ಅಧಿಕಾರಿಗಳು ಟೋಲ್‌ವಿರೋಧಿ ಮುಖಂಡರೊಂದಿಗೆ ಟೋಲ್‌ನ ವಿವರವನ್ನು ನೀಡಿದರು. ಈ ವೇಳೆ ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದ ಹೋರಾಟಗಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಟೋಲ್ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಸಿಬ್ಬಂದಿಗಳು ಟೋಲ್‌ವಿರೋಧಿ ಹೋರಾಟಗಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಹೋರಾಟಗಾರರು ಟೋಲ್ ಕಂಪೆನಿ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ಓಡಿಸಿದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ಕಾರಿನಲ್ಲಿ ಅಲ್ಲಿಂದ ತೆರಳುವಂತೆ ಸೂಚಿಸಿದರು. ಇತ್ತ ಪೊಲೀಸರು ಹೋರಾಟಗಾರರನ್ನು ಸಮಾಧಾನ ಪಡಿಸಿದರು. ಅಧಿಕಾರಿಗಳನ್ನು ಪೊಲೀಸರು ಮತ್ತೆಕರೆಸಿಕೊಂಡರು. ಬಳಿಕ ಮಾಹಿತಿ ನೀಡಲು ಮುಂದಾದಾಗ ಟೋಲ್ ವಿರೋಧಿ ಹೋರಾಟಗಾರರು ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು.
ಟೋಲ್ ವಿರೋಧ ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ ಮಾತನಾಡಿ, ಟೋಲ್‌ನಿರ್ಮಾಣ ಪ್ರಸ್ತಾವನೆ ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿ ಐದು ದಿನಗಳ ಒಳಗಾಗಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗುವುದು ಎಂದರು.