ಮನುಷ್ಯರನ್ನು ಸಂರಕ್ಷಣೆ ಮಾಡುವುದೇ ನಿಜವಾದ ಧರ್ಮ: ಡಾ.ಗಣನಾಥ ಎಕ್ಕಾರು

Update: 2023-10-01 13:13 GMT

ಉಡುಪಿ, ಅ.1: ಮಹಾನ್‌ಪುರುಷರ ಪೂಜೆ ಮಾಡದೆ ಅವರ ಚಿಂತನೆಯನ್ನು ಅನುಸರಿಸಬೇಕು. ಎಲ್ಲ ಧರ್ಮಗ್ರಂಥಗಳು ಕೂಡ ಸಮಾನತೆ, ಸಹೋದರತೆ, ಮಾನವ ಸ್ವಾತಂತ್ರ್ಯದ ಸಂದೇಶವನ್ನು ಸಾರುತ್ತದೆ. ಮನುಷ್ಯರನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಧರ್ಮ ಮಾಡಬೇಕೆ ಹೊರತು ನಾಶ ಮಾಡುವುದಲ್ಲ ಎಂದು ಚಿಂತಕ, ನಿವೃತ್ತ ಪ್ರಾಧ್ಯಾಪಕ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.

ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಉಡುಪಿಯ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ಶನಿವಾರ ಸಾಹಿತಿ ಯೋಗೇಶ್ ಮಾಸ್ಟರ್ ಬರೆದ ‘ನನ್ನ ಅರಿವಿನ ಪ್ರವಾದಿ’ ಪುಸ್ತಕವನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.

ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಬದುಕಿನ ರಕ್ಷಣೆಗಾಗಿ ಇಂತಹ ಪುಸ್ತಕವನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ನಾವು ಈವರೆಗೆ ಕಾಪಾಡಿಕೊಂಡು ಬಂದ ನಮ್ಮ ದೇಶದ ಪ್ರಜಾಪ್ರಭುತ್ವ ಹಾಗೂ ಗೌರವಿನ್ವಿತ ಬದುಕು ಮುಂದುವರೆಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮಾತನಾಡಿ, ವ್ಯಾಪಾಕ ತಪ್ಪು ಕಲ್ಪನೆ ಹಾಗೂ ಸುಳ್ಳು ಪ್ರಚಾರ ವನ್ನು ಹಬ್ಬಿಸುವ ಈ ಕಾಲಘಟ್ಟ ದಲ್ಲಿ ಬಸವಣ್ಣ, ಪ್ರವಾದಿ, ಕನಕದಾಸ, ನಾರಾಯಣಗುರು ಸೇರಿದಂತೆ ಹಲವು ಮಹಾ ಪುರುಷರ ಬಗ್ಗೆ ವಸ್ತುನಿಷ್ಠವಾಗಿ ಅಧ್ಯಯನ ಮಾಡಬೇಕು. ಆಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗು ತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾಅದ್ ಬೆಳಗಾಮಿ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತಕ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಸಯೀದ್ ಇಸ್ಮಾಯಿಲ್ ಉಪಸ್ಥಿತರಿದ್ದರು. ನಿಸಾರ್ ಅಹ್ಮದ್ ಸ್ವಾಗತಿಸಿದರು. ಯಾಸೀನ್ ಮನ್ನಾ ವಂದಿಸಿದರು. ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News