ಸಮಾಜ ಪರಿವರ್ತನೆಯಲ್ಲಿ ರಂಗಭೂಮಿ ಪಾತ್ರ ಪ್ರಮುಖ: ವಂ.ಡೆನಿಸ್ ಡೆಸಾ

Update: 2025-03-29 23:23 IST
ಸಮಾಜ ಪರಿವರ್ತನೆಯಲ್ಲಿ ರಂಗಭೂಮಿ ಪಾತ್ರ ಪ್ರಮುಖ: ವಂ.ಡೆನಿಸ್ ಡೆಸಾ
  • whatsapp icon

ಉಡುಪಿ: ರಂಗಭೂಮಿ ಸ್ವಾತಂತ್ರ್ಯ ಪೂರ್ವ ದಿನಗಳಿಂದಲೂ ಆಡಳಿತ ನಡೆಸುವವರಿಗೆ ಪ್ರಶ್ನೆಗಳನ್ನು ಕೇಳಿದೆ ಹಾಗೂ ಸಮಾಜ ಪರಿವರ್ತನೆ ಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ತೊಟ್ಟಂ ಚರ್ಚಿನ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದ್ದಾರೆ.

ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆ ತೊಟ್ಟಂ ಹಾಗೂ ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಗಳ ಜಂಟಿ ಆಶ್ರಯದಲ್ಲಿ ಶನಿವಾರ ತೊಟ್ಟಂ ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾದ ಕಲಾವಿದ ನಾದಮಣಿ ನಾಲ್ಕೂರು ನೇತೃತ್ವದ ಕತ್ತಲ ಹಾಡು ಎಂಬ ವಿಶಿಷ್ಠ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಯೇಸು ಕ್ರಿಸ್ತ, ಬಸವಣ್ಣ, ಬುದ್ದ, ಕನಕದಾಸ ಇವರೆಲ್ಲರೂ ಮಾಡಿದ ಅನ್ಯಾಯದ ವಿರುದ್ದ ದನಿ ಎತ್ತಿ, ಧಾರ್ಮಿಕ, ರಾಜಕೀಯ ನಾಯಕರಿಗೆ ಪ್ರಶ್ನೆಗಳನ್ನು ಹಾಕುವುದರ ಮೂಲಕ ಮಾದರಿಯಾದರು. ಕಲ್ಮಶ ತುಂಬಿದ ಜಗತ್ತಿನಲ್ಲಿ ತಮ್ಮ ತಂಬೂರಿ ನಾದದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆ, ಸಹಿಷ್ಣುತೆ, ತ್ಯಾಗ, ಅಧ್ಯಾತ್ಮದ ಮಹತ್ವಗಳನ್ನು ಪ್ರಚುರಪಡಿಸುವ ವಿಶಿಷ್ಟ ಕಾಯಕವನ್ನು ನಾದಮಣಿ ನಾಲ್ಕೂರು ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಪ್ರಶ್ನೆ ಕೇಳುವ ಹಕ್ಕಿದ್ದು, ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷವನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗಿದ್ದು ಅದನ್ನು ಉಪಯೋಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಆಪತ್ಫಾಂಧವ ಈಶ್ವರ್ ಮಲ್ಪೆ ಹಾಗೂ ನಾದಮಣಿ ನಾಲ್ಕೂರು ಇವರನ್ನು ಸನ್ಮಾನಿಸಲಾಯಿತು. ಕತ್ತಲ ಹಾಡು ಪರಿಕಲ್ಪನೆಯಲ್ಲಿ ತತ್ವಪದ, ದಾಸರ ಪದ, ಕಡಕೋಳ ಮಡಿವಾಳಪ್ಪರ ವಚನ, ಅಬ್ರಹಾಂ ಲಿಂಕನ್ ಬರೆದ ಪತ್ರ, ಜಿ.ಎಸ್.ಶಿವರುದ್ರಪ್ಪನವರ ಭಾವಗೀತೆ ಮಾತ್ರವಲ್ಲದೆ ಹೊಸ ತಲೆಮಾರಿನ ಕವಿತೆಗಳನ್ನು ನಾದಮಣಿಯವರು ಸುಮಾರು ಎರಡುವರೆ ಗಂಟೆಗಳ ಕಾಲ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, ೨೦ ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಶ್ಮಾ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ರಮೇಶ್ ತಿಂಗಳಾಯ, ಸಾಮಾಜಿ ಸಂಪರ್ಕ ಸಾಧನಗಳ ಸಂಯೋಜಕ ಆಗ್ನೆಲ್ ಫೆರ್ನಾಂಡಿಸ್, ಪ್ರತಿಭಾಂಗಣ್ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಕ್ಲಾರೆನ್ಸ್ ಫೆರ್ನಾಂಡಿಸ್, ವಿನೋದ್, ಯಾದವ ಮೊದಲಾದವರು ಉಪಸ್ಥಿತರಿದ್ದರು. ಲವೀನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News