ಸಂತೆಕಟ್ಟೆ: ಬೀಡಿ ಕಾರ್ಮಿಕರಿಂದ ಪ್ರತಿಭಟನೆ
ಉಡುಪಿ, ಆ.18: ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಇಂದು ಮಾಲಕರು ಕಳೆದ ಮೂರು ವರ್ಷಗಳಿಂದ ಬೀಡಿ ಕಾರ್ಮಿಕರಿಗೆ ಕೊಡಲು ಬಾಕಿ ಇದ್ದ ತುಟ್ಟಿಭತ್ಯೆ ಹಾಗೂ ಕನಿಷ್ಟಕೂಲಿ ನೀಡುವಂತೆ ಒತ್ತಾಯಿಸಿ ಉಡುಪಿ ಸಂತಕಟ್ಟೆಯಲ್ಲಿ ಇರುವ ಗಣೇಶ ಬೀಡಿ ಕಂಪನಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಬೀಡಿ ಮಾಲಕರು ಬೀಡಿ ಕಾರ್ಮಿಕರಿಗೆ ಕೊಡಬೇಕಾಗಿದ್ದು ತುಟ್ಟಿಭತ್ಯೆ ವಿನಾಯಿತಿ ಕೋರಿ ಅಂದಿನ ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಪರಿಣಾಮ ಸರಕಾರ ಕಾರ್ಮಿಕ ವಿರೋಧಿಯಾಗಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಬೀಡಿ ಕಾರ್ಮಿ ಕರ ಸಂಘಟನೆಗಳು ನಡೆಸಿದ ಹೋರಾಟದಿಂದ ಸರಕಾರ ಆದೇಶವನ್ನು ಹಿಂದಕ್ಕೆ ಪಡೆಯಿತು.
ಇದರ ವಿರುದ್ಧ ಬೀಡಿ ಕಂಪೆನಿಗಳ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು,ಕಾರ್ಮಿಕರ ಸಂಘಟನೆಗಳು ಕಾನೂನು ಹೋರಾಟದ ಮೂಲಕ ನ್ಯಾಯಾಲಯ ಕಾರ್ಮಿಕ ಪರವಾದ ಆದೇಶ ಎತ್ತಿ ಹಿಡಿದು ಪ್ರತಿ ಸಾವಿರ ಬೀಡಿಗೆ 12.75 ರೂ.ನಂತೆ ನೀಡಲು ಆದೇಶ ಮಾಡಿತ್ತು.
ಆದರೆ ಬೀಡಿ ಮಾಲಕರು ಈ ಹಣ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಇಂದಿನ ಪ್ರತಿಭಟನೆ ನಡೆಸಲಾಗಿದೆ. ಅಲ್ಲದೇ 5(1)ಎ ಸಮಿತಿ ಕಾರ್ಮಿಕರ ಕನಿಷ್ಠ ಕೂಲಿ ಪರಿಷ್ಕರಿಸಿ ಒಂದು ಆವಿರ ಬೀಡಿಗೆ 210ರೂ.ನೀಡಲು ಶಿಫಾರಸ್ಸು ಮಾಡಿದ್ದರೂ ಇದರ ವಿರುದ್ಧವೂ ಮಾಲಕರು ತಡೆಯಾಜ್ಞೆ ತಂದಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಇಂದಿನ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರ ಹೋಬಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಖಜಾಂಚಿ ಶಶಿಧರ ಗೋಲ್ಲ, ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್ ಎಸ್., ಉಡುಪಿ ಬೀಡಿ ಟೋಬ್ಯಾಕೋ ಲೇಬರ್ ಯುನಿಯನ್ ಅಧ್ಯಕ್ಷೆ ನಳಿನಿ ಎಸ್., ಕುಂದಾಪುರ ತಾಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಬಲ್ಕಿಸ್, ಸಿಐಟಿಯು ಮುಖಂಡರಾದ ಮೋಹನ್, ಬೀಡಿ ಸಂಘದ ಮುಖಂಡರಾದ ಡಿ.ಗಿರಿಜಾ, ರಮಣಿ ಮುಂತಾದವರು ಉಪಸ್ಥಿತರಿದ್ದರು.